ಶಾಸಕ ರಾಜು ಕಾಗೆ ಹೇಳಿಕೆಗೆ ಮಹಿಳಾ ಬಿಜೆಪಿ ಅಸಮಾಧಾನ

| Published : May 06 2024, 12:31 AM IST

ಶಾಸಕ ರಾಜು ಕಾಗೆ ಹೇಳಿಕೆಗೆ ಮಹಿಳಾ ಬಿಜೆಪಿ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆ ಕಾಂಗ್ರೆಸ್‌ ಪಕ್ಷದ ಕೀಳು ಮಟ್ಟದ ಸಂಸ್ಕೃತಿಗೆ ಸಾಕ್ಷಿಯಾಗಿದೆ ಎಂದು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನೀಡಿರುವ ಹೇಳಿಕೆ ಖಂಡನೀಯ ಎಂದು ಕೊಡಗು ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಇಡೀ ವಿಶ್ವವೇ ಮೆಚ್ಚಿಕೊಂಡಿರುವ ನಾಯಕ ನರೇಂದ್ರ ಮೋದಿ ಅವರ ಬಗ್ಗೆ ‘ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ’ ಎಂದು ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷದ ಕೀಳು ಮಟ್ಟದ ಸಂಸ್ಕೃತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

ಜನರ ಆಶೀರ್ವಾದದಿಂದ ಮೋದಿ ಅವರು ದೀರ್ಘಾಯುಷ್ಯ ಹೊಂದುತ್ತಾರೆ ಮತ್ತು ಈ ಬಾರಿಯೂ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಲಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸಿಗರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಕೆಟ್ಟದ್ದನ್ನು ಮಾತ್ರ ಬಯಸುತ್ತದೆ, ಶಾಸಕ ರಾಜು ಕಾಗೆ ಅವರು ನೀಡಿರುವ ಹೇಳಿಕೆ ಅವರ ಪಕ್ಷದ ಸಿದ್ಧಾತಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ. ಕಾಂಗ್ರೆಸಿಗರ ಕ್ಷುಲ್ಲಕ ಹೇಳಿಕೆಗಳಿಂದ ಬಿಜೆಪಿ ಎಂದಿಗೂ ಧೃತಿಗೆಡುವುದಿಲ್ಲ, ಪ್ರಧಾನಿ ನರೇಂದ್ರಮೋದಿಯವರ ಯೋಗಕ್ಷೇಮಕ್ಕಾಗಿ ಇಡೀ ಮಹಿಳಾ ಸಮೂಹ ಪ್ರಾರ್ಥಿಸುತ್ತಿದೆ. ಈಗಾಗಲೇ ಹಲವು ದೇವಾಲಯಗಳಲ್ಲಿ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.