ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಕೇಂದ್ರ ಸರ್ಕಾರದ ಅನುದಾನದಿಂದ ಹೊರತು ರಾಜ್ಯ ಸರ್ಕಾರದ್ದಲ್ಲ. ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಮಂಗಳೂರು ಅಭಿವೃದ್ಧಿಗೆ ಚಿಕ್ಕಾಸೂ ಬಿಡುಗಡೆ ಮಾಡದೆ ನಿರ್ಲಕ್ಷ ವಹಿಸಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಎರಡು ತಿಂಗಳಿಗೊಮ್ಮೆ ಮಾತ್ರ ಬರುತ್ತಿದ್ದಾರೆ. ಅದು ಕೂಡ ಉದ್ಘಾಟನೆ, ಶಿಲಾನ್ಯಾಸಕ್ಕೆ ಬರುತ್ತಿದ್ದಾರೆಯೇ ವಿನಃ ಅಭಿವೃದ್ಧಿ ಬಗ್ಗೆ ಚರ್ಚಿಸಲು ಅಲ್ಲ. ಅಷ್ಟರ ಮಟ್ಟಿಗೆ ಈ ಜಿಲ್ಲೆಯ ಜನರ ಬಗ್ಗೆ ಉಸ್ತುವಾರಿ ಸಚಿವರಿಗೆ ನಿರ್ಲಕ್ಷ ಇದೆ ಎಂದು ಆರೋಪಿಸಿದರು.ಪಿಂಚಣಿಗೆ ಪರದಾಟ:
ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಪಿಂಚಣಿ ಸಿಗದೆ ಜನಸಾಮಾನ್ಯರು ಪರದಾಟ ನಡೆಸುತ್ತಿದ್ದಾರೆ. ವೃದ್ಧಾಪ್ಯ ವೇತನ, ಲಿಂಗತ್ವ ಅಲ್ಪಸಂಖ್ಯಾತರು, ವಿಧವಾ ವೇತನ, ನಿವೃತ್ತ ನೌಕರರ ಪಿಂಚಣಿ ಹೀಗೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಹಾಗೂ ಮಾಸಾಶನಗಳು ಸ್ಥಗಿತಗೊಂಡಿವೆ. ಅದನ್ನೇ ನಂಬಿ ಜೀವನ ನಡೆಸುವವರು ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ಕೂಡಲೇ ಪಿಂಚಣಿ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಆದರೆ ಸರ್ಕಾರ ಮಾತ್ರ ಸಾಧನಾ ಸಮಾವೇಶ ಮಾಡಿಕೊಂಡು ಬಡ ಜನತೆಯ ಹೊಟ್ಟೆ ಉರಿಸುತ್ತಿದೆ ಎಂದರು.ಕೇಂದ್ರ ಅನುದಾನ ಬಳಕೆ:
ಮಂಗಳೂರಿನಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಕದ್ರಿ ಹಿಲ್ಸ್‌ನ ಆವರಣದಲ್ಲಿ 20.85 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಕೇಂದ್ರ ಅನುದಾನ ಬಳಕೆಯಾಗಿದೆ. ಆದರೆ ಕಾಂಗ್ರೆಸ್ ಅನುದಾನ ನೀಡಿದ್ದು ಎಂದು ಕಾಂಗ್ರೆಸಿಗರು ಕ್ಲೇಮ್ ಮಾಡಿದರೂ ಅಚ್ಚರಿ ಇಲ್ಲ ಎಂದರು.
ಮುಂಜಾಗ್ರತಾ ಕ್ರಮಕ್ಕೆ ನಿರ್ಲಕ್ಷ್ಯ: ಮಳೆಗಾಲಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಪಾಲಿಕೆ ವ್ಯಾಪ್ತಿಯಲ್ಲಿ ರಾಜ ಕಾಲುವೆ ಹಾಗೂ ಚರಂಡಿ ಹೂಳೆತ್ತುವಿಕೆ, ಪ್ರತಿ ವಾರ್ಡ್‌ಗೆ ಗ್ಯಾಂಗ್‌ಮೆನ್ ನೇಮಕ ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಸೂಚಿಸಿದರೂ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶಾಸಕರು ಆರೋಪಿಸಿದರು.
ಮಂಗಳೂರಲ್ಲೇ ಹೈ ಕೋರ್ಟ್ ಪೀಠ: ಮಂಗಳೂರಿನಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎನ್ನುವುದು ಕರಾವಳಿಗರ ಒಕ್ಕೊರಲ ಬೇಡಿಕೆ. ಪಕ್ಷ ಬೇಧ ರಹಿತವಾಗಿ ಸರ್ಕಾರವನ್ನು ಆಗ್ರಹಿಸಲಾಗಿದೆ. ಸ್ಪೀಕರ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರು, ಸಂಸದರು, ಇತರೆ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಇದಕ್ಕೆ ಅಪಸ್ವರ ಇದ್ದರೂ ನಾವು ಮಂಗಳೂರಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸುತ್ತಿದ್ದೇವೆ ಎಂದರು.ಮುಖಂಡರಾದ ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ರಮೇಶ್ ಕಂಡೆಟ್ಟು, ಪೂರ್ಣಿಮಾ, ರಮೇಶ್ ಹೆಗ್ಡೆ, ಸುರೇಖಾ, ಮೋಹನ ಪೂಜಾರಿ ಮತ್ತಿತರರು ಇದ್ದರು.