ಜನರ ಜೀವನ ಸುಧಾರಣೆಯಾದರೆ ಶಾಸಕತ್ವ ಸಾರ್ಥಕ: ಪಿ.ರವಿಕುಮಾರ್

| Published : Aug 10 2025, 01:30 AM IST

ಸಾರಾಂಶ

ರೈತರು ಬೆಳೆ ಬೆಳೆದು ತಮ್ಮ ಮಕ್ಕಳಿಗೆ ಮದುವೆ ಮಾಡಿ ವರ್ಷ ಪೂರ್ತಿ ಅನ್ನ ತಿನ್ನಲು ಸಾಧ್ಯವಾಗುತ್ತದೆ. ಅವರ ಆರ್ಥಿಕ ಮಟ್ಟ ಸುಧಾರಿಸಿದಾಗ ಗ್ರಾಮದ ಅಭಿವೃದ್ಧಿಯಾಗುತ್ತದೆ. ನಾವು ಇಂದು ಇರುತ್ತೇವೋ, ಇಲ್ಲವೋ ಆದರೆ ನಾವು ಮಾಡಿದ ಕೆಲಸ ಶಾಶ್ವತವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಚುನಾವಣೆಯಲ್ಲಿ ಮತ ಪಡೆಯುವುದು ಮುಖ್ಯವಲ್ಲ. ಗೆದ್ದ ಮೇಲೆ ಜನರ ಜೀವನ ಸುಧಾರಣೆಯಾಗುವುದು ಬಹಳ ಮುಖ್ಯ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ತಾಲೂಕಿನ ಚಂದಗಾಲು ಗ್ರಾಮದ ಕೆರೆಕೋಡಿ, ತೂಬು ಹಾಗೂ ೧೦ನೇ ವಿತರಣಾ ನಾಲೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿರುವ ಜನರ ಜೀವನ ಮಟ್ಟ ಸುಧಾರಿಸಬೇಕು. ಈ ಹಿನ್ನೆಲೆಯಲ್ಲಿ ಕೆರೆ- ಕಟ್ಟೆಗಳು, ನಾಲೆಗಳ ದುರಸ್ತಿ ಕಾಮಗಾರಿಗಳು ನಡೆಯಬೇಕು. ನಾಲೆಗಳಲ್ಲಿ ನೀರು ಸರಾಗವಾಗಿ ಹರಿದು ರೈತರ ಹೊಲ- ಗದ್ದೆಗಳನ್ನು ಸೇರಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ರೈತರು ಬೆಳೆ ಬೆಳೆದು ತಮ್ಮ ಮಕ್ಕಳಿಗೆ ಮದುವೆ ಮಾಡಿ ವರ್ಷ ಪೂರ್ತಿ ಅನ್ನ ತಿನ್ನಲು ಸಾಧ್ಯವಾಗುತ್ತದೆ. ಅವರ ಆರ್ಥಿಕ ಮಟ್ಟ ಸುಧಾರಿಸಿದಾಗ ಗ್ರಾಮದ ಅಭಿವೃದ್ಧಿಯಾಗುತ್ತದೆ. ನಾವು ಇಂದು ಇರುತ್ತೇವೋ, ಇಲ್ಲವೋ ಆದರೆ ನಾವು ಮಾಡಿದ ಕೆಲಸ ಶಾಶ್ವತವಾಗಿರುತ್ತದೆ ಎಂದು ನುಡಿದರು.

ನಂದಳ್ಳಿ ಗ್ರಾಮದಲ್ಲಿ ೨೫೦ ಮತದಾರರಿದ್ದಾರೆ. ನಂದಳ್ಳಿಯಿಂದ ಹಟ್ನಾದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ೮ ಕೋಟಿ ರು. ಹಣ ಬೇಕಿದೆ. ಇರುವ ಮತಗಳಲ್ಲಿ ನನಗೆ ಕೇವಲ ೫೦ ಮತಗಳು ಮಾತ್ರ ಬಂದಿವೆ. ಆದರೆ, ಯಾರೂ ಈ ರಸ್ತೆಯನ್ನು ಸುಧಾರಣೆ ಮಾಡಲಿಲ್ಲ. ನಾನೂ ಮಾಡದಿದ್ದರೆ ಇನ್ನಾರೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿ, ಆ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಹಲ್ಲೇಗೆರೆಯಿಂದ ಗಣಿಗವರೆಗೆ ೧೦೦ ಕೋಟಿ ರು. ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ. ಯಾವ ಮಂತ್ರಿಯೂ ಮಾಡದ ಕಾರ್ಯವನ್ನು ಶಾಸಕನಾದ ನಾನು ಮಾಡಿದ್ದೇನೆ. ಎರಡು ವರ್ಷಕ್ಕೆ ಇಷ್ಟು ಅಭಿವೃದ್ಧಿ ಮಾಡಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಇನ್ನೂ ೫೦೦ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತ್ಯಾಗರಾಜು, ಗುತ್ತಿಗೆದಾರ ಪ್ರಕಾಶ್, ಮುಖಂಡರಾದ ಶಿವರಾಮು, ಕರಿಯಪ್ಪ, ಶಂಕರೇಗೌಡ, ಚಿಕ್ಕಬೋರಯ್ಯ, ಪಿಡಿಒ ಅಶ್ವಿನಿ ಭಾಗವಹಿಸಿದ್ದರು.