ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಜಾರಿಗೊಳಿಸಲು ಒತ್ತಾಯಿಸಿ ಸಾಂಪ್ರಾದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ಆ.19ರಂದು ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ವೀರಣ್ಣ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದವರೆಗೆ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ರಾಜ್ಯದಲ್ಲಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ಇದೇ ಅದಿವೇಶನದಲ್ಲೇ ಜಾರಿಗೊಳಿಸುವಂತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯಿಂದ ಸುಮಾರು 500ಕ್ಕೂ ಹೆಚ್ಚು ಕುರಿಗಾಹಿಗಳು, ಕುರುಬ ಸಮಾಜ ಬಾಂಧವರು ಭಾಗವಹಿಸುವರು. ಕುರಿಗಳನ್ನೇ ನೆಚ್ಚಿಕೊಂಡು ಬದುಕನ್ನು ಕಟ್ಟಿಕೊಂಡ ಕುರಿಗಾಹಿಗಳು ಆಹಾರಕ್ಕಾಗಿ, ಜೀವನಕ್ಕಾಗಿ ಊರೂರು ಅಲೆದಾಡುತ್ತಾ, ಕಾಡು, ಮೇಡು ಎನ್ನದೇ ಅಲೆಮಾರಿಗಳಾಗಿ ಜೀವಿಸುತ್ತಿದ್ದಾರೆ. ಮಳೆ, ಚಳಿ, ಬಿಸಿಲೆನ್ನದೇ ಊರೂರು ಅಲೆಯುವ ಕುರಿಗಾಹಿಗಳ ಮೇಲೆ ಹಲ್ಲೆ, ಅತ್ಯಾಚಾರ, ಹತ್ಯೆಗಳು, ಕುರಿಗಳ ಕಳವು ಅವ್ಯಾಹತವಾಗಿ ಹೆಚ್ಚುತ್ತಲೇ ಇದೆ ಎಂದು ಅವರು ಆಕ್ರೋಶ ಹೊರ ಹಾಕಿದರು.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಕೆರೂರು ಗ್ರಾಮದಲ್ಲಿ ಕುರಿಗಾಹಿಯೊಬ್ಬರ ಕತ್ತನ್ನು ಕತ್ತರಿಸಿ, ಭೀಕರವಾಗಿ ಕೊಲ್ಲಲಾಗಿದೆ. ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಮಾಡಲಾಗಿದೆ. ಕೊಪ್ಪಳದ ಬುಲ್ಡೋಟಾ ಕಂಪನಿ ನೌಕರರು ಕುರಿಗಾರರಿಗೆ ರಕ್ತ ಬರುವಂತೆ ಹೊಡೆದು, ಓಡಿಸಿದ್ದು ಹೀಗೆ ಸಾವಿರಾರು ಘಟನೆ ನಡೆಯುತ್ತಲೇ ಇದೆ ಎಂದರು.
ಕುರಿಗಳ ಕಳ್ಳತನ, ಅರಣ್ಯ ಇಲಾಖೆಯ ಅಧಿಕಾರಿ, ನೌಕರರಿಂದ ದೌರ್ಜನ್ಯ ನಿರಂತರ ನಡೆಯುತ್ತಲೇ ಇದೆ. ತಾವು ಕುರಿ ಮೇಯಿಸುತ್ತಿದ್ದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿಗಾರರ ಸಂಕಷ್ಟಗಳ ಬಗ್ಗೆ ಅರಿವಿದ್ದವರು. ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಹರಕ ಹೊತ್ತವರು, ಕುರಿಗಳನ್ನು ಮಾರಿ ಚುನಾವಣಾ ವೆಚ್ಚಕ್ಕೆಂದು ಹಣ ನೀಡಿದ್ದನ್ನು ಸಹ ಯಾರೂ ಮರೆಯುವಂತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಅದಕ್ಕೆ ಕುರುಬ ಸಮುದಾಯ ಹೆಚ್ಚಿನ ಬೆಂಬಲ ನೀಡಿದೆಯೆಂಬುನ್ನು ಮರೆಯಬಾರದು ಎಂದು ತಿಳಿಸಿದರು.ಸರ್ಕಾರ ಕುರಿಗಾರರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದರೆ, ಕುರಿಗಾಹಿಗಳಿಗೆ ಭದ್ರತೆ, ಆತ್ಮಸ್ಥೈರ್ಯ ಹೆಚ್ಚಾಗಬಹುದು. ಇದೇ ಕಾರಣಕ್ಕೆ ಕಾಯ್ದೆ ಜಾರಿಗೆ ಅನೇಕ ಮನವಿಗಳನ್ನು ಅರ್ಪಿಸಲಾಗಿದೆ. ಕಳೆದ ಅಧಿವೇಶನದಲ್ಲಿ ಬಜೆಟ್‌ನಲ್ಲಿ ಕುರಿಗಾರರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವ ಉಲ್ಲೇಖವಿತ್ತು. ಆದರೆ, ಕಾಯ್ದೆ ಜಾರಿಗೆ ಸರ್ಕಾರ ಯಾಕೆ ಮೀನ-ಮೇಷ ಎಣಿಸುತ್ತಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದರು.
ಕುರಿಗಾರರು ಸರ್ಕಾರದಿಂದ ಏನನ್ನೂ ದೊಡ್ಡದಾಗಿ ಕೇಳುತ್ತಿಲ್ಲ. ತಮ್ಮ ಜೀವ ಮತ್ತು ಜೀವನವನ್ನು ರಕ್ಷಿಸಿಕೊಳ್ಳಲು ರಕ್ಷಣೆ, ಭದ್ರತೆಗೆ ಕಾಯ್ದೆ ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ ಕುರಿಗಾಹಿಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಖಂಡಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕುರಿಗಾಹಿಗಳು ತಮ್ಮ ಹಕ್ಕುಗಳಿಗಾಗಿ ಸಾಂಪ್ರಾದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಮಹಾಸಭಾ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷರಾದ ಜಿ.ಷಣ್ಮುಖಪ್ಪ, ಸಲ್ಲಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಘನರಾಜ, ಅಣ್ಣಪ್ಪ ಕರಗಾರ್, ಮಲ್ಲಪ್ಪ ಬನ್ನಿ ಇತರರು ಇದ್ದರು.