ಸಾರಾಂಶ
ಸಾಧಕರ ನಾಡು ಧಾರವಾಡದಲ್ಲಿಂದು ಪರಂಪರೆಯ ಬಹುದೊಡ್ಡ ಕುಡಿಗಳು ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಇಂಥ ಸಾಧಕರ ಸಾಲಿನಲ್ಲಿರುವ ಪಂ. ರವಿ ಕೂಡ್ಲಗಿಯವರ ನೆನಪುಗಳನ್ನು ಕಟ್ಟಿಕೊಡುವ ಒಂದು ಕೃತಿ ರಚನೆಯಾಗಬೇಕಿದೆ.
ಧಾರವಾಡ:
ಭಾರತೀಯ ಕಲೆ, ಸಂಸ್ಕೃತಿ ವಿಶ್ವಕ್ಕೆ ಮಾದರಿ. ಪಾಶ್ಚಿಮಾತ್ಯರು ಸಹ ನಮ್ಮ ಸಂಸ್ಕೃತಿಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಡಾ. ಶಿವರಾಜ ದೇಶಮುಖ ಹೇಳಿದರು.ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯು ಪಂ. ರವಿ ಕೂಡ್ಲಿಗಿ ಅವರ 10ನೇ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ “ತಬಲಾ ಮಾಂತ್ರಿಕ ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಹಾಗೂ ಸಂಗೀತೋತ್ಸವ ಉದ್ಘಾಟಿಸಿದ ಅವರು, ಯುವ ಜನಾಂಗ ಭಾರತೀಯ ಪರಂಪರೆ ಮುಂದುವರಿಸಿಕೊಂಡು ಹೋಗುವ ಅಗತ್ಯತೆ ಇದೆ ಎಂದರು.
ಹಿರಿಯ ಹಿಂದೂಸ್ಥಾನಿ ಗಾಯಕ ಡಾ. ಅಶೋಕ ಹುಗ್ಗಣ್ಣವರ, ತಮ್ಮ ಮತ್ತು ರವಿ ಕೂಡ್ಲಿಗಿ ಅವರ ಒಡನಾಟ ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸಾಧಕರ ನಾಡು ಧಾರವಾಡದಲ್ಲಿಂದು ಪರಂಪರೆಯ ಬಹುದೊಡ್ಡ ಕುಡಿಗಳು ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಇಂಥ ಸಾಧಕರ ಸಾಲಿನಲ್ಲಿರುವ ಪಂ. ರವಿ ಕೂಡ್ಲಗಿಯವರ ನೆನಪುಗಳನ್ನು ಕಟ್ಟಿಕೊಡುವ ಒಂದು ಕೃತಿ ರಚನೆಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.ಯಾವಗಲ್‌ಗೆ ಪ್ರಶಸ್ತಿ:
ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಪಂ. ರವೀಂದ್ರ ಯಾವಗಲ್ ಅವರಿಗೆ ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಸತೀಶ ಜಾಧವ ಮತ್ತು ಡಾ. ಬಸವರಾಜ ಕಲೆಗಾರ ಅವರನ್ನು ಸನ್ಮಾನಿಸಲಾಯಿತು. ರವಿ ಕೂಡ್ಲಗಿ ನಿರೂಪಿಸಿದರು. ಡಾ. ಎ.ಎಲ್. ದೇಸಾಯಿ ಸ್ವಾಗತಿಸಿದರು, ಭೀಮಾಶಂಕರ ಬಿದರನೂರ ಪರಿಚಯಿಸಿದರು. ವಿಜಯಲಕ್ಷ್ಮಿ ಸುಭಾಂಜಿ ವಂದಿಸಿದರು.ನಂತರ ಜರುಗಿದ ಸಂಗೀತೋತ್ಸವದಲ್ಲಿ ವಿದುಷಿ ಸುಜಾತಾ ಗುರವ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನದಲ್ಲಿ ರಾಗ ಬಿಹಾಗ ಮತ್ತು ವಚನ ಪ್ರಸ್ತುತಪಡಿಸಿದರು. ಪ್ರಶಸ್ತಿ ಪುರಸ್ಕೃತ ಪಂ. ರವೀಂದ್ರ ಯಾವಗಲ್ ತೀನತಾಲದಲ್ಲಿ ವಿಶೇಷವಾಗಿ ಪೇಶ್ಕಾರ, ಕಾಯ್ದಾ, ತುಕಡಾ, ಚಕ್ರದಾರ್‌ಗಳನ್ನು ತಬಲಾ ವಾದನದಲ್ಲಿ ಪ್ರಸ್ತುತ ಪಡಿಸಿದರು. ಡಾ. ಎ.ಎಲ್. ದೇಸಾಯಿ ರಚನೆಯ ಗೀತಗಾಯನವನ್ನು ಸ್ವರ ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಡಾ. ಶಕ್ತಿ ಪಾಟೀಲ ಅವರ ಸ್ವರ ಸಂಯೋಜನೆಯಲ್ಲಿ ಪ್ರಸ್ತುತ ಪಡಿಸಿದರು.