ರಕ್ತದಾನ ಮೂಲಕ ಮೋದಿ‌ ಹುಟ್ಟು ಹಬ್ಬ ಆಚರಣೆ

| Published : Sep 18 2025, 01:10 AM IST

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದ ವಿಶ್ವವಿದ್ಯಾಲಯ ಬಳಿ ಬೃಹತ್‌ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದ ವಿಶ್ವವಿದ್ಯಾಲಯ ಬಳಿ ಬೃಹತ್‌ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ನಗರ ಅಧ್ಯಕ್ಷ ಟಿ.ಕೆ.ಧನುಷ್ ಮೊದಲಾದ ಮುಖಂಡರು ರಕ್ತದಾನ ಮಾಡಿ ಮೋದಿಯವರ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು, ಸಮಾಜ ಸೇವಾಕಾರ್ಯಗಳನ್ನು ಮಾಡುವ ಮೂಲಕ ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಆಚರಿಸಲಾಗುತ್ತಿದೆ. ಇಲ್ಲಿ ರಕ್ತದಾನ ಮಾಡಿ ನೆರವಾದ ಎಲ್ಲರೂ ಸಾರ್ಥಕ ಕೆಲಸ ಮಾಡಿರುವುದು ಶ್ಲಾಘನೀಯ. ಮೋದಿಯವರ ಹುಟ್ಟುಹಬ್ಬದ ನೆಪದಲ್ಲಿ ಇಡೀ ದೇಶದಲ್ಲಿ ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದರು.

ಪ್ರಧಾನ ಮಂತ್ರಿಯಂತಹ ನಾಯಕರ ಪ್ರತಿ ಹೆಜ್ಜೆಯನ್ನೂ ಜನ ಗಮನಿಸುತ್ತಾರೆ. ಅವರನ್ನು ಅನುಸರಿಸುತ್ತಾರೆ. ಅಂತಹ ನಾಯಕರ ಹುಟ್ಟುಹಬ್ಬಆಚರಣೆ ಸಮಾಜಕ್ಕೆ ಸಹಾಯ ಮಾಡುವಂತಾಗಿ ಮಾದರಿಯಾಗಬೇಕು. ಬಿಜೆಪಿ ಅಂತಹ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ವಿಶ್ವದಲ್ಲಿ ಅನೇಕ ರಾಷ್ಟ್ರಗಳಿಗೆ ಅಭದ್ರತೆ ಕಾಡುತ್ತಿದೆ. ಆದರೆ ಪ್ರಧಾನಿ ಮೋದಿಯವರ ದೂರದೃಷ್ಟಿ, ಆಡಳಿತ ವ್ಯವಸ್ಥೆಯಿಂದಾಗಿ ಭಾರತ ಸುಭದ್ರವಾಗಿದೆ ಹಾಗೂ ಬೆಳವಣಿಗೆಯಾಗುತ್ತಿದೆ. ದೇಶದ ಜಿಡಿಪಿ ಬೆಳವಣಿಗೆಯಾಗುತ್ತಿದ್ದು ಭಾರತವನ್ನು ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಮೋದಿಯವರ ಸಂಕಲ್ಪ ಶಕ್ತಿಗೆ ದೇಶದ 140 ಕೋಟಿ ಜನ ಬಲ ತುಂಬಬೇಕು. ಮೋದಿವರು ಬಲಿಷ್ಠ ಭಾರತ ನಿರ್ಮಾಣಕ್ಕೆಉತ್ತಮ ತಳಹದಿ ಹಾಕಿಕೊಟ್ಟಿದ್ದಾರೆ, ಅದು ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಜ್ಯೋತಿ ಗಣೇಶ್ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಅಕ್ಟೋಬರ್ 2 ರವರೆಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸೇವಾ ಪಾಕ್ಷಿಕ್‌ ಯೋಜನೆಯಾಗಿ ಸಮಾಜ ಸೇವಾ ಕಾರ್ಯಗಳನ್ನು ಆಯೋಜಿಸಲಾಗಿದೆ. ಇಂದು ಎಲ್ಲೆಡೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಗಿಡನೆಡುವ ಕಾರ್ಯಕ್ರಮಗಳು ನಡೆದಿವೆ ಎಂದರು.

ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ್ದ ಕಿಬ್ಬನಹಳ್ಳಿ ಬಸವಣ್ಣ ಅವರನ್ನುಜಿಲ್ಲಾ ಬಿಜೆಪಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು, ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ನಗರ ಅಧ್ಯಕ್ಷ ಟಿ.ಕೆ.ಧನುಷ್, ನಿಕಟಪೂರ್ವ ಅಧ್ಯಕ್ಷ ಟಿ.ಎಚ್.ಹನುಮಂತರಾಜು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ, ತಿಪಟೂರು ಮುಖಂಡ ಲೋಕೇಶ್, ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಮಾಜಿ ಸದಸ್ಯರಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಪುಟ್ಟರಾಜು, ಮನೋಹರಗೌಡ, ಮಂಜುನಾಥ್, ಮುಖಂಡರಾದದಿಲೀಪ್‌ಕುಮಾರ್, ಸತ್ಯಮಂಗಲ ಜಗದೀಶ್, ವಿರೂಪಾಕ್ಷಪ್ಪ, ಗಣೇಶ್‌ ಪ್ರಸಾದ್, ಗಂಗೇಶ್, ಲತಾಬಾಬು, ಅಕ್ಷಯ್‌ ಚೌಧರಿ ಸೇರಿದಂತೆ ವಿವಿಧ ಮೋರ್ಚಾ, ಮಂಡಲಗಳ ಮುಖಂಡರು ಭಾಗವಹಿಸಿದ್ದರು. ಶಿಬಿರದಲ್ಲಿ ದಾನಿಗಳು ನೀಡಿದ 83 ಯೂನಿಟ್‌ರಕ್ತ ಸಂಗ್ರಹವಾಯಿತು.