ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಮೋ ಯುವ ರನ್ ವಾಕಥಾನ್ ಗೆ ನಗರದ ಎಂ.ಜಿ.ರಸ್ತೆಯ ಜೈ ಭೀಮ್ ಹಾಸ್ಟೆಲ್ ಬಳಿ ಚಾಲನೆ ನೀಡಲಾಯಿತು.ಈ ವೇಳೆ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 75 ವರ್ಷಗಳ ಜೀವನದ ಬಹುಭಾಗ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಅವರ ಜನ್ಮದಿನ ಪ್ರಯುಕ್ತ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15ದಿನಗಳ ಕಾಲ ಸೇವಾ ಪಾಕ್ಷಿಕ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ನಮೋ ಯುವ ರನ್ ಮ್ಯಾರಥಾನ್ ಮತ್ತು ವಾಕಥಾನ್ ನಡೆಯುತ್ತಿದೆ.
ಅಕ್ಟೋಬರ್ 2ವರೆಗೂ ಎರಡು ವಾರಗಳು ನಿರಂತರವಾಗಿ ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಯುವ ಸಬಲೀಕರಣ , ಮಹಿಳಾ ಸಬಲೀಕರಣ ಮತ್ತು ಕ್ರೀಡೆ, ವಿಶೇಷವಾಗಿ ಯುವಕರಿಗೆ ಫಿಟ್ ಇಂಡಿಯಾದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಪ್ರತಿ ದಿನ ನಡೆಸಲಾಗುವುದು. ಶಕ್ತಿಯುತ ಮತ್ತು ಆರೋಗ್ಯವಂತ ಸಮಾಜ ದೇಶದಲ್ಲಿ ಇರಬೇಕು ಎಂಬುದು ಮೋದಿಯವರ ಕನಸಾಗಿದೆ. ‘ಫಿಟ್ ಇಂಡಿಯಾ, ಹಿಟ್ ಇಂಡಿಯಾ , ಗ್ರೇಟ್ ಇಂಡಿಯಾ’ ನಮ್ಮ ಲೋಕಸಭಾ ಕ್ಷೇತ್ರದ ಸಂಕಲ್ಪವಾಗಿದೆ ಎಂದರು.ರಾಜಕಾರಣಿಯನ್ನೂ ಮೀರಿದ ವ್ಯಕ್ತಿತ್ವ:
ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವವು ರಾಜಕಾರಣಿಯನ್ನು ಮೀರಿದ್ದು, ಅವರದ್ದು ರಾಷ್ಟ್ರದ ಕಲ್ಯಾಣಕ್ಕಾಗಿ ಮುಡಿಪಾದ ಧ್ಯೇಯಚಾಲಿತ ವ್ಯಕಿತ್ವ. ಅವರಿಗೆ ರಾಷ್ಟ್ರದ ಉನ್ನತಿ ಮತ್ತು ಅದರ ನಾಗರಿಕರ ಕಲ್ಯಾಣವು ಕೇವಲ ಆದರ್ಶಗಳಲ್ಲ, ಮಾರ್ಗದರ್ಶಿ ತತ್ವಗಳಾಗಿವೆ. ಎಲ್ಲರನ್ನೂ ಒಳಗೊಂಡ ಆಡಳಿತ ಮಾದರಿಯನ್ನು ಖಾತ್ರಿಪಡಿಸಿಕೊಳ್ಳುವತ್ತ ಅವರ ನಿರಂತರ ಗಮನವು ಅವರ ನಾಯಕತ್ವವನ್ನು ವಿಶಿಷ್ಟವಾಗಿಸಿದೆ. ಅವರ ನೀತಿಗಳು ಮತ್ತು ಅವುಗಳ ಅನುಷ್ಠಾನವು ದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ಯಾವುದೇ ವ್ಯಕ್ತಿ ಅಥವಾ ಸಮುದಾಯವು ಹಿಂದೆ ಉಳಿಯಬಾರದು ಎಂಬುದನ್ನು ಯಾವಾಗಲೂ ಒತ್ತಿ ಹೇಳುತ್ತವೆ. ಅವರಿಗೆ ಆಡಳಿತವು ಅಧಿಕಾರದ ಸಾಧನವಲ್ಲ, ಬದಲಾಗಿ ಸೇವೆಯ ಮಾಧ್ಯಮವಾಗಿದೆ. ಅವರ ನಾಯಕತ್ವದಲ್ಲಿ ದೇಶದ ಬಡವರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಅವು ತಮ್ಮ ನಿಗದಿತ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯೂ ಆಗಿವೆ. ಈ ಪಾಕ್ಷಿಕವು ಮೋದಿಯವರು ಮಾಡಿರುವ ಸೇವೆಗೆ ನಾವು ನೀಡುವ ಸಹಕಾರ ಮತ್ತು ಬೆಂಬಲವಾಗಿದೆ ಎಂದರು.ನಮೋ ಯುವ ರನ್ ವಾಕಥಾನ್ ಚಾಲನೆಗೆ ಮೊದಲು ಸಂಸದ ಡಾ.ಕೆ.ಸುಧಾಕರ್ ಜೈ ಭೀಮ್ ಹಾಸ್ಟೆಲ್ ಆವರಣದಲ್ಲಿನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ, ನಮೋ ಯುವ ರನ್ ವಾಕಥಾನ್‌ಗೆ ಹಸಿರು ನಿಶಾನೆ ತೋರಿಸಿ ತಾವೂ ವಾಕಥಾನ್ ನಲ್ಲಿ ಪಾಲ್ಗೊಂಡರು.
ನಗರದ ಎಂ.ಜಿ.ರಸ್ತೆಯ ಜೈ ಭೀಮ್ ಹಾಸ್ಟೆಲ್ ಬಳಿಯಿಂದ ಪ್ರಾರಂಭವಾದ ನಮೋ ಯುವ ರನ್ ವಾಕಥಾನ್ ಎಂಜಿ ರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ ಬಿಬಿ ರಸ್ತೆಯ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಮುಕ್ತಾಯವಾಯಿತು. ನಮೋ ಯುವ ರನ್ ವಾಕಥಾನ್ ನಲ್ಲಿ ಸಹಸ್ರಾರು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಯುವ ಜನತೆ ಮತ್ತು ಮುಖಂಡರು ಭಾಗವಹಿಸಿದ್ದರು. ಪ್ರಥಮವಾಗಿ ವಾಕಥಾನ್ ಗುರಿ ಮುಟ್ಟಿದ 50 ಮಂದಿಗೆ ಪದಕ, ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಮತ್ತು ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಟೀ ಶರ್ಟ್ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಖಾದಿಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಮಾಜಿ ಉಫಾಧ್ಯಕ್ಷ ಕೆ.ವಿ.ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಮುಖಂಡರಾದ ಚಿಕ್ಕಗರಿಗಿ ರೆಡ್ಡಿ, ಗಿರೀಶ್ ಗರಿಗಿರೆಡ್ಡಿ, ಚಿನ್ನಪ್ಪರೆಡ್ಡಿ, ಎಸ್ ಆರ್ ಎಸ್ ದೇವರಾಜ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಸಾರ್ವಜನಿಕರು ಮತ್ತಿತರರು ಇದ್ದರು.
------ಕೋಟ್..........
ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರುವನ್ನಾಗಿ ಪ್ರಜ್ವಲಿಸುವಂತೆ ಮಾಡಿದ್ದಾರೆ. ಮೋದಿ ಅವರ ನಾಯಕತ್ವ ಇಡೀ ವಿಶ್ವ ಒಪ್ಪಿಕೊಳ್ಳುತ್ತಿದೆ. ಕಳೆದ 11 ವರ್ಷದಲ್ಲಿ ಭಾರತ ಹಿಂದೆಂದೂ ಕಂಡಿರದಂತಹ ಅಭಿವೃದ್ಧಿ ಕಂಡಿದೆ. ಭಾರತವನ್ನು ಆರ್ಥಿಕತೆಯಲ್ಲಿ ಅತ್ಯಂತ ಬಲಿಷ್ಠವನ್ನಾಗಿಸಿದ್ದಾರೆ. ಇವತ್ತು ದೇಶದ ಜಿಡಿಪಿ ಶೇ 7.9 ರಷ್ಟಿದೆ. ಹಣದುಬ್ಬರ ಭಾರೀ ಕಡಿಮೆಯಲ್ಲಿದೆ.140 ಕೋಟಿ ಜನಸಂಖ್ಯೆಯ ಭಾರತವನ್ನು ಇಡೀ ವಿಶ್ವದಲ್ಲೇ ಶಕ್ತಿಯುತ ದೇಶವನ್ನಾಗಿ ಮಾಡಲು ಪಣ ತೊಟ್ಟಿರುವ ಮತ್ತು ಭಾರತಕ್ಕಾಗಿ ಶ್ರೇಷ್ಠವಾದುದನ್ನು ಸಾಧಿಸಲು ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇವರು ದೀರ್ಘಾಯಸ್ಸು, ಶಕ್ತಿ ಮತ್ತು ಅತ್ಯುತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಡಾ.ಕೆ ಸುಧಾಕರ್, ಸಂಸದ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
----ಸಿಕೆಬಿ-1 ಪ್ರಧಾನಿ ನರೇಂದ್ರ ಮೋದಿಯವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ನಮೋ ಯುವ ರನ್ ವಾಕಥಾನ್‌ಗೆ ಸಂಸದ ಡಾ.ಕೆ.ಸುಧಾಕರ್ ಹಸಿರು ನಿಶಾನೆ ತೋರಿಸಿದರು.