ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಬರುವೆ : ಸಂಸದ ಡಾ.ಕೆ.ಸುಧಾಕರ್‌

| N/A | Published : Aug 15 2025, 01:00 AM IST

ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಬರುವೆ : ಸಂಸದ ಡಾ.ಕೆ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕು ಪುಟಗಳ ಡೆತ್‌ನೋಟ್‌ ಇದೆ ಎಂದು ಹೇಳುತ್ತಿದ್ದರೂ, ಅದು ಚಾಲಕ ಬಾಬು ಅವರೇ ಬರೆದಿದ್ದಾ ಎಂಬುದು ಗೊತ್ತಿಲ್ಲ. ಆದರೆ ಇದಕ್ಕೂ ಮುನ್ನವೇ ಮೂರು ದಿನಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಡೆತ್‌ನೋಟ್‌ ಹರಿದಾಡಿದೆ ಎಂದು ತಿಳಿದುಬಂದಿದೆ.  

 ಚಿಕ್ಕಬಳ್ಳಾಪುರ :  ಚಾಲಕ ಬಾಬು ಆತ್ಮ*ತ್ಯೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರಯತ್ನಿಸುತ್ತಿದ್ದಾರೆ.  ಆದರೆ ಜನರು ಇದನ್ನು ನಂಬುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನರಿಗಾಗಿ ತಾವು ಮಾಡಿರುವ ಕೆಲಸಗಳು ಜನರಿಗೆ ತಿಳಿದಿದೆ. ಈ ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಗೆ ಬರುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು. 

ನಗರದ ಸಂಸದರ ಗೃಹ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರು ಚಾಲಕ ಬಾಬು ಆತ್ಮ*ತ್ಯೆ ಮಾಡಿಕೊಂಡಿರುವುದು ತಮಗೆ ಬಹಳ ದುಃಖ ತಂದಿದೆ. ಅ‍ವರ ಕುಟುಂಬಕ್ಕೆ ಭಗವಂತ ಚೈತನ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. 

ಸಾವಿಗೆ ಮುನ್ನವೇ ಡೆತ್‌ನಟ್‌ ಪ್ರಕಟನಾಲ್ಕು ಪುಟಗಳ ಡೆತ್‌ನೋಟ್‌ ಇದೆ ಎಂದು ಹೇಳುತ್ತಿದ್ದರೂ, ಅದು ಚಾಲಕ ಬಾಬು ಅವರೇ ಬರೆದಿದ್ದಾ ಎಂಬುದು ಗೊತ್ತಿಲ್ಲ. ಆದರೆ ಇದಕ್ಕೂ ಮುನ್ನವೇ ಮೂರು ದಿನಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಡೆತ್‌ನೋಟ್‌ ಹರಿದಾಡಿದೆ ಎಂದು ತಿಳಿದುಬಂದಿದೆ. ಆಗಲೇ ಕುಟುಂಬದವರು, ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಎಫ್‌ಎಸ್‌ಎಲ್‌ನಲ್ಲಿ ಅವರೇ ಈ ಪತ್ರ ಬರೆದಿದ್ದಾ ಎಂಬುದು ಸಾಬೀತಾಗಬೇಕಿದೆ ಎಂದರು.

 ಮೃತ ಬಾಬು ಪರಿಚಯ ಇಲ್ಲತಮಗೆ ನಾಗೇಶ್‌, ಮಂಜುನಾಥ್‌ ಹಾಗೂ ಚಾಲಕ ಬಾಬು ಪರಿಚಯವಿಲ್ಲ. ನಂತರ ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ದಲಿತ ಮುಖಂಡರಾದ ಕೃಷ್ಣಮೂರ್ತಿ ಅವರನ್ನು ಕುಡಾ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರ ಅಳಿಯ ಈ ನಾಗೇಶ್‌. ನನಗೆ ಕೃಷ್ಣಮೂರ್ತಿ ಅವರ ಪರಿಚಯವಿದೆಯೇ ಹೊರತು, ನಾಗೇಶ್‌ ಪರಿಚಯವಿಲ್ಲ. ಮಂಜುನಾಥ್‌ ಕೂಡ ನನಗೆ ಆಪ್ತರಲ್ಲ. ಚಾಲಕ ಬಾಬು ಅವರನ್ನು ಒಮ್ಮೆಯೂ ನೋಡಿಯೇ ಇಲ್ಲ.‌ ಅನೇಕರಿಗೆ ಗುತ್ತಿಗೆ ಉದ್ಯೋಗ ಕೊಡಿಸಿದ್ದೇನೆ. ಸರ್ಕಾರಿ ಕೆಲಸ ಕೊಡಿಸುವುದು ಸುಲಭವಲ್ಲ ಎಂದರು. 

 ದಲಿತರನ್ನು ಎತ್ತಿಕಟ್ಟಲು ಯತ್ನ ಈ ಪ್ರಕರಣದಲ್ಲಿ ನಾನು ಯಾರ ಜಾತಿ ನಿಂದನೆಯನ್ನೂ ಮಾಡಿಲ್ಲ. ಆದರೂ ಅಂತಹ ಸೆಕ್ಷನ್‌ಗಳನ್ನೇ ನನ್ನ ವಿರುದ್ಧ ದಾಖಲಿಸಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಕುಗ್ಗಿಸಿದರೆ ಬಿಜೆಪಿ ಪ್ರಭಾವ ಕುಗ್ಗಿಸಬಹುದು ಎಂದು ಅಂದುಕೊಂಡಿದ್ದಾರೆ. ದಲಿತ ಅಸ್ತ್ರವನ್ನು ಮುಂದಿಟ್ಟುಕೊಂಡು ನನ್ನನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದರು.  

ದಲಿತ ಸಮುದಾಯಕ್ಕೆ ಕೊಡುಗೆಕಳೆದ ಹತ್ತು ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮಾಡಿಸಿದ್ದೇನೆ. ವಿಶ್ವೇಶ್ವರಯ್ಯ ಜಲ ನಿಗಮದ ಮೂಲಕ 46.50 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಮಾಡಿದ್ದೇನೆ. ಸಣ್ಣ ನೀರಾವರಿ ಇಲಾಖೆಯಡಿ 120 ಕೊಳವೆ ಬಾವಿಗಳನ್ನು ಮಾಡಿಸಿದ್ದೇನೆ. 45 ಚೆಕ್‌ಡ್ಯಾಮ್‌ಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ವಿವಿಧ ಯೋಜನೆಗಳಡಿ ದಲಿತರಿಗೆ ಕಳೆದ ಹತ್ತು ವರ್ಷಗಳಲ್ಲಿ 15,303 ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಎಂದು ಸಂಸದರು ವಿವರಿಸಿದರು. ಕಾಂಗ್ರೆಸ್‌ ಸರ್ಕಾರದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಈ ರೀತಿ ಇರಲಿಲ್ಲ. ಅವರನ್ನು ಎಲ್ಲರೂ ಸೇರಿ ಹಾಳು ಮಾಡಿದ್ದಾರೆ. ಅವರ ನೀತಿ ಪಾಠಗಳನ್ನು ನಾವು ಕೇಳಿದ್ದೇವೆ. ಅದಕ್ಕೆ ವಿರುದ್ಧವಾಗಿ ಅವರೇ ನಡೆಯುತ್ತಿದ್ದಾರೆ. ಗೃಹ ಸಚಿವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. 

ಸುದ್ದಿಗೋಷ್ಟಿಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ನಗರಸಭೆ ಮಾಜಿ ಉಪಾಧ್ಯಕ್ಷ ಜೆ.ನಾಗರಾಜ್, ಮಾಜಿ ಶಾಸಕ ಎಂ.ರಾಜಣ್ಣ ಮತ್ತಿತರರು ಇದ್ದರು.

Read more Articles on