ರಾಜ್ಯಕ್ಕೆ 16000 ಟನ್‌ ಹೆಚ್ಚುವರಿರಸಗೊಬ್ಬರ: ಡಾ.ಕೆ.ಸುಧಾಕರ್‌

| Published : Jul 29 2025, 01:01 AM IST

ರಾಜ್ಯಕ್ಕೆ 16000 ಟನ್‌ ಹೆಚ್ಚುವರಿರಸಗೊಬ್ಬರ: ಡಾ.ಕೆ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ ಹೆಚ್ಚುವರಿಯಾಗಿ ಸುಮಾರು 16 ಸಾವಿರ ಟನ್‌ ರಸಗೊಬ್ಬರವನ್ನು ಕಳುಹಿಸಿಕೊಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆಪಿ.ನಡ್ಡಾ ಭರವಸೆ ನೀಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ನವದೆಹಲಿ

ರಾಜ್ಯಕ್ಕೆ ಹೆಚ್ಚುವರಿಯಾಗಿ ಸುಮಾರು 16 ಸಾವಿರ ಟನ್‌ ರಸಗೊಬ್ಬರವನ್ನು ಕಳುಹಿಸಿಕೊಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆಪಿ.ನಡ್ಡಾ ಭರವಸೆ ನೀಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಕರ್ನಾಟಕದ ಬಿಜೆಪಿ ಸಂಸದರ ನಿಯೋಗ ಸೋಮವಾರ ದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ರಸಗೊಬ್ಬರದ ವಿತರಣೆಯಲ್ಲಿ ಆಗಿರುವ ಗೊಂದಲ ಕುರಿತು ಚರ್ಚೆ ನಡೆಸಿತು. ನಿಯೋಗಕ್ಕೆ ಕೇಂದ್ರ ಸಚಿವರು ಈ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಸಂಸದರಾದ ಡಾ.ಕೆ.ಸುಧಾಕರ್‌, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಿ.ಸಿ.ಗದ್ದಿಗೌಡರ್, ರಮೇಶ ಜಿಗಜಿಣಗಿ, ಕ್ಯಾ.ಬ್ರಿಜೇಶ್ ನಿಯೋಗದಲ್ಲಿದ್ದರು.

===ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಪ್ರಸಕ್ತ ಬಿತ್ತನೆ ಋತುವಿಗೆ ಕರ್ನಾಟಕಕ್ಕೆ 6.30 ಲಕ್ಷ ‌ಮೆಟ್ರಿಕ್ ಟನ್ ಯೂರಿಯಾ ಪೂರೈಸಲು ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಕರ್ನಾಟಕದ ಬೇಡಿಕೆಗೆ ಸ್ಪಂದಿಸಿ ಕೇಂದ್ರ ಸರ್ಕಾರ ಜುಲೈ ಅಂತ್ಯಕ್ಕೆ ಒಟ್ಟು 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಿದೆ. ರಾಜ್ಯದಲ್ಲಿ‌ ಈವರೆಗೆ ಸುಮಾರು 7.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮಾರಾಟವಾಗಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದರು.

ಬಾಕಿ ಉಳಿದಿರುವ 1.65 ಲಕ್ಷ ಮೆಟ್ರಿಕ್ ಟನ್‌ ಯೂರಿಯಾ, ರಾಜ್ಯದ ಗೋದಾಮಿನಲ್ಲಿ ದಾಸ್ತಾನು ಇರುವುದಾಗಿ ಕೇಂದ್ರ ಸಚಿವ ನಡ್ಡಾ ಮಾಹಿತಿ ನೀಡಿದ್ದಾರೆ. ಹೆಚ್ಚುವರಿಯಾಗಿ ಸುಮಾರು 16 ಸಾವಿರ ಟನ್‌ ರಸಗೊಬ್ಬರವನ್ನು ರಾಜ್ಯಕ್ಕೆ ಕಳುಹಿಸಿಕೊಡಲು ಕೇಂದ್ರ ನಿರ್ಧರಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ದಾ ಅವರಿಗೆ ಕರ್ನಾಟಕದ ರೈತರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು. ಕ್ಷುಲ್ಲಕ ರಾಜಕೀಯ ಬೇಡ:

ರಾಜ್ಯದ ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಸಕಾಲಕ್ಕೆ ಸರಬರಾಜು ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಲಭ್ಯವಿರುವ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ಷುಲ್ಲಕ ರಾಜಕೀಯ ಬಿಟ್ಟು ರೈತರ ಹಿತದೃಷ್ಟಿಯಿಂದ ಸಮರ್ಪಕ ವಿತರಣೆ ಕಡೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಕೋಟ್‌:

ರಾಜ್ಯಕ್ಕೆ ಹೆಚ್ಚುವರಿಯಾಗಿ 16,000 ಟನ್‌ ರಸಗೊಬ್ಬರ ನೀಡುವುದಾಗಿ ಕೇಂದ್ರ ಹೇಳಿದೆ. ರೈತರ ವಿಷಯದಲ್ಲಿ ರಾಜಕೀಯ ಬೇಡ. ರಾಜ್ಯದ ಮಿಸ್‌ ಮ್ಯಾನೇಜ್‌ಮೆಂಟ್ ನಿಂದ ಆಗಿರುವ ತಪ್ಪಿ ಇದು. ವಿನಾಕಾರಣ ಕೇಂದ್ರದ ವಿರುದ್ಧ ಬೊಟ್ಟು ಮಾಡುವುದು ಸರಿಯಲ್ಲ.

- ಬಸವರಾಜ ಬೊಮ್ಮಾಯಿ, ಸಂಸದ.

ಸಿಕೆಬಿ-6

ದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡ ಅವರನ್ನು ಕರ್ನಾಟಕದ ಬಿಜೆಪಿ ಸಂಸದರ ನಿಯೋಗ ಭೇಟಿಯಾಗಿ ರಾಜ್ಯದಲ್ಲಿ ರಸಗೊಬ್ಬರದ ವಿತರಣೆಯಲ್ಲಿ ಆಗಿರುವ ಗೊಂದಲ ಕುರಿತು ಚರ್ಚಿಸಿತು.