ಸಾರಾಂಶ
ಕನಕಪುರದಲ್ಲಿ ಅಮರ ಜ್ಯೋತಿ ಅಂಗವಿಕಲರ ಸಂಸ್ಥೆಯು ಕಳೆದ 20 ವರ್ಷಗಳ ಹಿಂದೆ ಸಣ್ಣದಾಗಿ ಪ್ರಾರಂಭಗೊಂಡು ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ, ವಿಕಲಚೇತನರಿಗೆ ಮಾರ್ಗದರ್ಶನವಾಗಿ ಕೆಲಸ ಮಾಡುತ್ತಾ ಬೆನ್ನೆಲುಬಾಗಿ ನಿಂತಿದೆ .
ಕನ್ನಡಪ್ರಭ ವಾರ್ತೆ ಕನಕಪುರ
ನಗರದ ಅಮರ ಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಹಲವಾರು ವಿಶೇಷ ಚೇತನರು ಪ್ರಯೋಜನ ಪಡೆದುಕೊಂಡರು.ವಿಶ್ವ ವಿಕಲಚೇತನರ ದಿನದ ಅಂಗವಾಗಿ ನಗರದ ರೋಟರಿ ಭವನದಲ್ಲಿ ಅಮರ ಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ತಾಲೂಕಿನ ಸುಮಾರು 4೦೦ಕ್ಕೂ ಹೆಚ್ಚು ವಿಕಲಚೇತನರು ಶಿಬಿರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಗಾಗಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು, ತಪಾಸಣೆಯ ಜೊತೆಗೆ ಔಷಧಿಯನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ ಮಾತನಾಡಿ, ಕನಕಪುರದಲ್ಲಿ ಅಮರ ಜ್ಯೋತಿ ಅಂಗವಿಕಲರ ಸಂಸ್ಥೆಯು ಕಳೆದ 20 ವರ್ಷಗಳ ಹಿಂದೆ ಸಣ್ಣದಾಗಿ ಪ್ರಾರಂಭಗೊಂಡು ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ, ವಿಕಲಚೇತನರಿಗೆ ಮಾರ್ಗದರ್ಶನವಾಗಿ ಕೆಲಸ ಮಾಡುತ್ತಾ ಬೆನ್ನೆಲುಬಾಗಿ ನಿಂತಿದೆ ಎಂದು ಶ್ಲಾಘಿಸಿದರು.ಸಂಘವು ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ ಮಾರ್ಗದರ್ಶನ ನೀಡಿ, ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ಕೊಡುತ್ತ ಬಂದಿದ್ದು ಇದೇ ರೀತಿ ಸಂಸ್ಥೆಯ ಸಮಾಜ ಕಲ್ಯಾಣ ಕೆಲಸಗಳು ಮುಂದುವರೆಯಲಿ ಎಂದು ಆಶಿಸಿದರು.
ಅಮರಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಶಿವರಾಂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಲಗುನಾ ಗಾರ್ಮೆಂಟ್ಸ್ ನ ಎಚ್ .ಆರ್. ಸ್ಮಿತಾ, ಕನಕಪುರ ಎಂ.ಆರ್ ಡಬ್ಲ್ಯೂ ನಟರಾಜು, ಅಮರಜ್ಯೋತಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ರಾಮಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.