ಪಂಚಮಸಾಲಿ ಸಮಾಜ ಹಗುರವಾಗಿ ಪರಿಗಣಿಸಬೇಡಿ: ಡಾ.ವಿಜಯಲಕ್ಷ್ಮೀ ತುಂಗಳ

| Published : Dec 13 2024, 12:47 AM IST

ಪಂಚಮಸಾಲಿ ಸಮಾಜ ಹಗುರವಾಗಿ ಪರಿಗಣಿಸಬೇಡಿ: ಡಾ.ವಿಜಯಲಕ್ಷ್ಮೀ ತುಂಗಳ
Share this Article
  • FB
  • TW
  • Linkdin
  • Email

ಸಾರಾಂಶ

ಐದು ಜನ ಹೋರಾಟಗಾರರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದ್ದು ಖಂಡನೀಯ ಎಂದರು. ಲಾಠಿ ಪ್ರಹಾರದಲ್ಲಿ ಗಾಯಗೊಂಡ ಹೋರಾಟಗಾರರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪಂಚಮಸಾಲಿ ಸಮಾಜ ತಮ್ಮ ಹಕ್ಕಿನ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಹತ್ತಿಕ್ಕಲು ರಾಜ್ಯ ಸರ್ಕಾರ ಹೋರಾಟಗಾರರ ಮೇಲೆ ಲಾಠಿಪ್ರಹಾರ ಮಾಡಿರುವುದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ ಹೇಳಿದರು.

ಗುರುವಾರ ನಗರದ ದೇಸಾಯಿ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಬೆಳಗಾವಿಯಲ್ಲಿ ಸಮಾಜದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟ ಹತ್ತಿಕ್ಕಲು, ಲಾಠಿ ಪ್ರಹಾರ ದಂಥಹ ಹಿಂಸಾತ್ಮಕ ನಿಲುವು ತಾಳುವುದು ಸರ್ಕಾರಕ್ಕೆ ಶೋಭೆ ತರುವ ಸಂಗತಿಯಲ್ಲ. ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತು ಕತೆ ನಡೆಸಬೇಕಿತ್ತು. ಅದನ್ನು ಬಿಟ್ಟು ನ್ಯಾಯ ಕೇಳುತ್ತಿದ್ದವರನ್ನು ಲಾಠಿಪ್ರಹಾರ ಮಾಡಿದ್ದು ಹಿಟ್ಲರ್‌ ನೀತಿಯಾಗಿದೆ. ಐದು ಜನ ಹೋರಾಟಗಾರರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದ್ದು ಖಂಡನೀಯ ಎಂದರು. ಲಾಠಿ ಪ್ರಹಾರದಲ್ಲಿ ಗಾಯಗೊಂಡ ಹೋರಾಟಗಾರರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ರಾಜ್ಯದಲ್ಲಿ ₹80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದರು.

ಸಮಾಜದ ಮುಖಂಡರಾದ ಮಹದೇವಪ್ಪ ಈಟಿ, ಯೋಗಪ್ಪ ಸವದಿ, ಸುರೇಶಗೌಡ ಪಾಟೀಲ, ಬಸವನಗೌಡ ಪಾಟಿಲ, ಸುಭಾಸ ಮುಂತಾದವರು ಸರ್ಕಾರದ ಕ್ರಮ ಖಂಡಿಸಿದರು. ಸರ್ಕಾರ 2ಎ ಮೀಸಲಾತಿ ನೀಡುವ ಮೂಲಕ ಪಂಚಮಸಾಲಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಅಪ್ಪಾಸಾಹೇಬ ಪಾಟೀಲ, ಜಿ.ಬಿ.ಕೌಜಲಗಿ, ಬಸಪ್ಪ ಹುದ್ದಾರ, ಅಪ್ಪಾಸಾಹೆಬ ಬಿರಾದಾರ, ವಿರುಪಾಕ್ಷಯ್ಯ ಪೂಜಾರ, ಹಣಮಂತ ಪಾಟಿಲ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.