ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಜಗತ್ತಿನ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಯನ್ನು ತಾಯಂದಿರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕಲಿಸುವಂತೆ ಹಿರಿಯ ರಂಗಕರ್ಮಿ ಹಾಗೂ ಚಿತ್ರನಟ ದೊಡ್ಡಣ್ಣ ಕೈಮುಗಿದು ಮನವಿ ಮಾಡಿಕೊಂಡರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಹಿರಿಯ ಚಿತ್ರನಟಿ ಕಲಾ ಶಾರದೆ ಲೀಲಾವತಿ ವೇದಿಕೆಯಲ್ಲಿ ನಾಗಮಂಗಲ ಕನ್ನಡ ಸಂಘದಿಂದ ಆಯೋಜಿಸಿದ್ದ 16ನೇ ನಾಗರಂಗ ನಾಟಕೋತ್ಸವದಲ್ಲಿ ರಂಗ ಗೌರವ ಸ್ವೀಕರಿಸಿ ಮಾತನಾಡಿದರು.ಜನ್ಮಕೊಟ್ಟ ತಾಯಿ ಮತ್ತು ನಾವು ಹುಟ್ಟಿರುವ ಮಣ್ಣು ಸ್ವರ್ಗಕ್ಕಿಂತಲೂ ಮಿಗಿಲಾದದ್ದು. ಇಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಈ ಮಣ್ಣಿನ ಋಣ ತೀರಿಸಬೇಕು. ಮಕ್ಕಳು ಹೊಟ್ಟೆಪಾಡಿಗಾಗಿ ಯಾವ ಭಾಷೆಯನ್ನಾದರೂ ಕಲಿಯಲಿ. ಆದರೆ, ಕನ್ನಡಕ್ಕಿರುವ ಗಮ್ಮತ್ತು, ತಾಕತ್ತು ಇನ್ಯಾವ ಭಾಷೆಗೂ ಇಲ್ಲ. ಹಾಗಾಗಿ ತಾಯಂದಿರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು ಎಂದು ಕೋರಿದರು.
ಜಗತ್ತಿನ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಭಾಷೆಗೆ ಯಾವ ಭಾಷೆಗೂ ಸಿಗಲಾರದಷ್ಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತ ಭಾಷೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಮಾತನಾಡಿದಂತೆ ಬರೆಯಲು ಲಿಪಿ ಉಳ್ಳ. ಬರೆದದ್ದನ್ನು ಯಥಾವತ್ತಾಗಿ ಮಾತನಾಡುವ ಶಕ್ತಿಯುಳ್ಳ ಸಂಧಿ, ಸಮಾಸ, ವ್ಯಾಕರಣ ಅಲ್ಪಪ್ರಾಣ, ಮಹಾಪ್ರಾಣ ಇರುವ ಭಾಷೆ ಯಾವುದಾದರೂ ಇದ್ದರೆ ಅದುವೇ ಕಸ್ತೂರಿ ಕನ್ನಡಭಾಷೆ ಮಾತ್ರ ಎಂದರು.ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಯಾವುದಾದರೂ ಇದ್ದರೆ ಅದುವೇ ಮಂಡ್ಯ ಜಿಲ್ಲೆ. ಕನ್ನಡ ಸಾಹಿತ್ಯಕ್ಕಿಂತಲೂ ಶ್ರೇಷ್ಠವಾದುದ್ದು ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಆದ್ದರಿಂದ ಕನ್ನಡ ಭಾಷೆ ಉಳಿಸಿ ಬೆಳೆಯಬೇಕು. ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಕನ್ನಡ ಕಲಿಸುವ ಕೆಲಸವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಲಮೇಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಮಾದರಿ ಉನ್ನತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಹಾಡಿಗೆ ಸ್ವಾಗತ ನೃತ್ಯ ಪ್ರದರ್ಶಿಸಿದರು. ಕನ್ನಡ ಕಾದಂಬರಿಕಾರ ಕುಂ.ವೀರಭದ್ರಪ್ಪ ನುಡಿ ಗೌರವ ಸ್ವೀಕರಿಸಿದರು.ನಾಟಕೋತ್ಸವ ನಡೆಯುತ್ತಿರುವ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣವನ್ನು ವಿಶೇಷ ರೀತಿಯಲ್ಲಿ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿದೆ. ಅಲ್ಲದೇ, ಸಿದ್ಧ ಉಡುಪುಗಳು, ಅಲಂಕಾರಿಕಾ ವಸ್ತುಗಳು, ತಿಂಡಿ ತಿನಿಸು, ಪುಸ್ತಕ ಮಳಿಗೆ, ಆಹಾರ ಮಳಿಗೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಬಗೆಯ ಅಂಗಡಿ ಮಳಿಗೆಗಳು ಕಾಲೇಜು ಮುಂಭಾಗದಲ್ಲಿ ತೆರೆದುಕೊಂಡು ನಾಟಕೋತ್ಸವಕ್ಕೆ ಮೆರಗು ನೀಡುತ್ತಿವೆ. ರಂಗಾಭಿಮಾನಿಗಳು ವಿವಿಧ ಬಗೆಯ ತಿಂಡಿ ತಿನಿಸುಗಳ ರುಚಿಯನ್ನು ಸವಿದರು. ಒಟ್ಟಾರೆ ನಾಗಮಂಗಲ ಪಟ್ಟಣದಲ್ಲಿ ಒಂದು ವಾರಕಾಲ ನಾಟಕಗಳ ಜಾತ್ರೆಯ ಸಂಭ್ರಮ ಮನೆಮಾಡಿದೆ.