ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಯಮನೂರು ಚಾಂಗದೇವರ ಭಕ್ತರಿಗೆ ಸಿಹಿ ಸುದ್ದಿ. ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡುವವರಿಗೆ ಕರ್ನಾಟಕ ನೀರಾವರಿ ನಿಗಮವು ಸ್ನಾನಘಟ್ಟ ನಿರ್ಮಿಸಿಕೊಡಲಿದೆ. ಇದಕ್ಕಾಗಿ ಬೆಣ್ಣಿಹಳ್ಳ ಪ್ರವಾಹ ತಡೆ ಯೋಜನೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಯಾವುದೇ ನದಿಯಿಲ್ಲ. ಆದರೆ, ಮಳೆಗಾಲದಲ್ಲಿ ಉಕ್ಕೇರುವ ಬೆಣ್ಣಿಹಳ್ಳ-ತುಪರಿಹಳ್ಳ ಯಾವುದೇ ನದಿಗಿಂತ ಕಮ್ಮಿಯಿಲ್ಲ. ಮಳೆಗಾಲದ ಮೂರ್‍ನಾಲ್ಕು ತಿಂಗಳು ಇವುಗಳ ಉಗ್ರಾವತಾರದಿಂದ ಇಡೀ ಹುಬ್ಬಳ್ಳಿ, ನವಲಗುಂದ, ಕುಂದಗೋಳ, ರೋಣ, ನರಗುಂದ ಸೇರಿದಂತೆ ಆರು ತಾಲೂಕುಗಳನ್ನು ಅಕ್ಷರಶಃ ಹೈರಾಣು ಮಾಡುತ್ತದೆ.
ಈ ನಡುವೆ ಮಳೆಗಾಲದಲ್ಲಿ ಜನರನ್ನು ಕಂಗೆಡಿಸುವ ಬೆಣ್ಣಿಹಳ್ಳದ ವಿಶೇಷವೂ ಇದೆ. ನವಲಗುಂದ ತಾಲೂಕಿನ ಯಮನೂರಿನ ಚಾಂಗದೇವರ ದೇವಸ್ಥಾನ ನಮ್ಮ ರಾಜ್ಯದಲ್ಲಷ್ಟೇ ಅಲ್ಲ. ಪಕ್ಕದ ಮಹಾರಾಷ್ಟ್ರದಲ್ಲೇ ದೊಡ್ಡ ಭಕ್ತಗಣ ಹೊಂದಿದೆ. ಪ್ರತಿವರ್ಷ ಚಾಂಗದೇವರ ದರ್ಶನಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದಲೂ ಜನರು ಆಗಮಿಸುತ್ತಾರೆ. ಚಾಂಗದೇವರ ದರ್ಶನಕ್ಕೆ ತೆರಳಬೇಕೆಂದರೆ ಅದರ ಪಕ್ಕದಲ್ಲೇ ನದಿಯಂತೆ ಹರಿದಿರುವ ಬೆಣ್ಣಿಹಳ್ಳದಲ್ಲಿ ಪುಣ್ಯಸ್ನಾನ ಮಾಡಿ ಹೋಗುವುದು ವಾಡಿಕೆ. ಜತೆಗೆ ಇಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಕೂಡ ಬರುವುದಿಲ್ಲ. ಜತೆಗೆ ಹಳೆಬಟ್ಟೆ ಇಲ್ಲೇ ಬಿಟ್ಟು ಹೋಗುವುದು ಒಳ್ಳೆಯದು ಎಂಬ ನಂಬಿಕೆ ಭಕ್ತರದು. ಹೀಗಾಗಿ ಸಾವಿರಾರು ಜನ ಸ್ನಾನ ಮಾಡುತ್ತಾರೆ.ಆದರೆ, ಬರುವಂತಹ ಭಕ್ತಗಣ ಸ್ನಾನ ಮಾಡುವುದಕ್ಕೆ ಯಾವುದೇ ಬಗೆಯ ಸೌಲಭ್ಯ ಇಲ್ಲದ ಕಾರಣ ಹಳ್ಳದಲ್ಲೇ ಸ್ನಾನ ಮಾಡುತ್ತಾರೆ. ಅಲ್ಲೇ ಬಟ್ಟೆ ಬಿಟ್ಟು ಹೋಗುವುದರಿಂದ ಟ್ರಕ್‌ಗಟ್ಟಲೇ ಹಳೆ ಬಟ್ಟೆಗಳ ರಾಶಿ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಇಲ್ಲಿ ಬಿದ್ದಿರುವ ಬಟ್ಟೆಗಳ ರಾಶಿ ಸ್ವಚ್ಛತೆಯನ್ನೇ ಕೆಲ ಸಂಘಟನೆಗಳು ಮಾಡಿದ್ದುಂಟು. ಇಲ್ಲಂದರೆ ಅಲ್ಲಿನ ಸ್ಥಳೀಯ ಆಡಳಿತಕ್ಕೆ ಸ್ವಚ್ಛಗೊಳಿಸುವಷ್ಟರಲ್ಲೇ ಸುಸ್ತು ಸುಸ್ತಾಗುತ್ತಿತ್ತು. ಭಕ್ತ ಗಣವೂ ಯಾವುದೇ ಬಗೆಯ ಸೌಲಭ್ಯವಿಲ್ಲದೇ ಸ್ನಾನ ಮಾಡಲು ಪರದಾಡಬೇಕಾಗುತ್ತದೆ.
ಸ್ನಾನಘಟ್ಟದ ಪ್ರಸ್ತಾಪ:ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಯಮನೂರಲ್ಲಿ ಸ್ನಾನಘಟ್ಟ ನಿರ್ಮಿಸಲು ಕರ್ನಾಟಕ ನೀರಾವರಿ ನಿಗಮ ಯೋಚಿಸಿದೆ. ಬೆಣ್ಣಿಹಳ್ಳ ಪ್ರವಾಹ ತಡೆಗಾಗಿ ₹ 1610 ಕೋಟಿ ಯೋಜನೆ ಸಿದ್ಧಪಡಿಸಿದೆ. ಯೋಜನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಜತೆಗೆ ₹ 200 ಕೋಟಿ ಕೂಡ ಬಿಡುಗಡೆಗೆ ಒಪ್ಪಿಕೊಂಡಿದೆ. ಈ ನಡುವೆ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸಿಡಬ್ಲ್ಯೂಸಿಗೂ ಕಳುಹಿಸಿದೆ. ಅದು ಕೂಡ ಒಪ್ಪಿದರೆ ಕೇಂದ್ರದಿಂದಲೂ ಇದಕ್ಕೆ ಅನುದಾನ ಲಭ್ಯವಾಗಲಿದೆ.
ಇದೇ ಯೋಜನೆಯಲ್ಲಿ ಯಮನೂರಲ್ಲಿ 150 ಮೀಟರ್ ಸ್ನಾನಘಟ್ಟ ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವುದಾಗಿದೆ. ತುಂಗಾ ನದಿ ತೀರ ಹಾಗೂ ಕಾವೇರಿಯ ನಿಮಿಷಾಂಬಾ ದೇವಸ್ಥಾನದ ಬಳಿ ನಿರ್ಮಿಸಿದಂತೆ ಇಲ್ಲೂ ಸ್ನಾನಘಟ್ಟ ನಿರ್ಮಿಸುವ ಕುರಿತು ಪ್ರಸ್ತಾಪಿಸಲಾಗಿದೆ.ಇದೀಗ ರಾಜ್ಯ ಸರ್ಕಾರ ಕೊಡಲು ಒಪ್ಪಿರುವ ₹ 200 ಕೋಟಿಯಲ್ಲಿ ಏನೇನು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ನ. 27ರಂದು ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಸಭೆ ನಡೆಯಲಿದೆ. ಈಗಿರುವ ಮೂಲಗಳ ಪ್ರಕಾರ 148 ಕಿಮೀ ವ್ಯಾಪ್ತಿಯಲ್ಲಿ ಕಾಲುವೆ ಪೈಕಿ 142 ಕಿಮೀ ಕಾಲುವೆ ಹೂಳೆತ್ತುವುದು. ಏರಿ ನಿರ್ಮಾಣ, ಇದರೊಂದಿಗೆ ಯಮನೂರಲ್ಲಿ ಸ್ನಾನಘಟ್ಟ ನಿರ್ಮಾಣ ಈಗಲೇ ಮಾಡಬೇಕೋ ಅಥವಾ ಎರಡನೆಯ ಹಂತದ ಅನುದಾನ ಬಿಡುಗಡೆಯಾದ ಮಾಡಬೇಕೋ ಎಂಬುದು ಕೂಡ ಚರ್ಚೆಯಾಗಿ ನಿರ್ಧಾರವಾಗಲಿದೆ. ಮೂಲಗಳ ಪ್ರಕಾರ 142 ಕಿಮೀ ವ್ಯಾಪ್ತಿಯೊಳಗೆ ಯಮನೂರಲ್ಲಿನ ಬೆಣ್ಣಿಹಳ್ಳವೂ ಸೇರುತ್ತದೆ. ಅದರ ಕಾಲುವೆ ಹೂಳೆತ್ತುವಾಗಲೇ ಸ್ನಾನಘಟ್ಟ ನಿರ್ಮಿಸುವುದು ಸೂಕ್ತ ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೊದಲ ಹಂತದ ಕಾಮಗಾರಿಯಲ್ಲೇ ಸ್ನಾನಘಟ್ಟ ಕೂಡ ಸೇರುವ ಸಾಧ್ಯತೆ ಎಂದು ಮೂಲಗಳು ತಿಳಿಸುತ್ತವೆ.
ಏನೇ ಆದರೂ ಯಮನೂರಲ್ಲಿ ಬೆಣ್ಣಿಹಳ್ಳ ವ್ಯಾಪ್ತಿಯಲ್ಲಿ ಸ್ನಾನಘಟ್ಟ ನಿರ್ಮಿಸಲು ಯೋಚಿಸಿರುವುದಕ್ಕೆ ಚಾಂಗದೇವರ ಭಕ್ತರಲ್ಲಿ ಸಂತಸದ ಹೊನಲು ಹರಡಿರುವುದಂತೂ ಸತ್ಯ. ಆದರೆ ಆದಷ್ಟು ಬೇಗನೆ ಸ್ನಾನಘಟ್ಟ ನಿರ್ಮಾಣವಾಗಬೇಕೆಂಬುದು ಭಕ್ತರ ಅಂಬೋಣ.ಬೆಣ್ಣಿಹಳ್ಳ ಪ್ರವಾಹ ತಡೆಗಾಗಿ ₹ 1610 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಲ್ಲೇ ಯಮನೂರಲ್ಲಿ ಸ್ನಾನಘಟ್ಟ ನಿರ್ಮಾಣದ ಕುರಿತು ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ ಯೋಜನೆಗೆ ಅಸ್ತು ಎಂದಿದೆ. ವಿಪತ್ತು ಉಪಶಮನ ನಿಧಿಯಡಿ ₹ 200 ಕೋಟಿ ನಿಧಿಯಡಿ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಜಾಲಗಾರ ಹೇಳಿದರು.