ಸಾರಾಂಶ
ಜಿಲ್ಲೆಯ ಗುರುಮಠಕಲ್‌ನ ರೈಸ್ ಮಿಲ್ ಗಳಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ವೇಳೆ ಸಿಕ್ಕ ಡೈರಿಯೊಂದರಲ್ಲಿನ ಬರೆದಿಟ್ಟಿರುವ ಅಂಶಗಳು ಲಂಚಾವತಾರದ ರಹಸ್ಯಗಳನ್ನು ಬಯಲಾಗಿಸಲಿವೆ.
ಆನಂದ್ ಎಂ. ಸೌದಿ
ಯಾದಗಿರಿ : ಜಿಲ್ಲೆಯ ಗುರುಮಠಕಲ್‌ನ ರೈಸ್ ಮಿಲ್ ಗಳಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ವೇಳೆ ಸಿಕ್ಕ ಡೈರಿಯೊಂದರಲ್ಲಿನ ಬರೆದಿಟ್ಟಿರುವ ಅಂಶಗಳು ಲಂಚಾವತಾರದ ರಹಸ್ಯಗಳನ್ನು ಬಯಲಾಗಿಸಲಿವೆ. ಪಡಿತರ ಅಕ್ಕಿ ಅಕ್ರಮದ ಮೂಲಕ್ಕೇ ತಲುಪಲು ಇದು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.
ಈ ಡೈರಿಯಲ್ಲಿ ಪಡಿತರ ಅಕ್ಕಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಆಹಾರಧಾನ್ಯಗಳನ್ನು ಸಾಗಾಟ ಮಾಡಿದ್ದ ವಾಹನಗಳ ನೋಂದಣಿ ಸಂಖ್ಯೆ- ದಿನಾಂಕ, ಎಲ್ಲಿಂದ ಎಲ್ಲಿಗೆ ಎಂಬ ವಿವರದ ಜೊತೆಗೆ ಅಂಗಡಿ ಮಾಲೀಕರುಗಳು-ದಲ್ಲಾಳಿಗಳು ಹಾಗೂ ಪೊಲೀಸರೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳಿಗೆ ನೀಡಿದ್ದ ಹಣದ ಬಗ್ಗೆ ನಮೂದಿಸಲಾಗಿದೆ. ಅಕ್ರಮದ ಮೂಲಬೇರಿಗೆ ತಲುಪುವಲ್ಲಿ ತನಿಖೆಗೆ ಇದು ಸಹಕಾರಿಯಾಗಲಿದೆ ಎಂದು "ಕನ್ನಡಪ್ರಭ"ಕ್ಕೆ ಬಲ್ಲ ಮೂಲಗಳು ತಿಳಿಸಿವೆ.
ಸಿಬಿಐ ತನಿಖೆ ನಡೆಸಿ; ಪ್ರಹ್ಲಾದ್ ಜೋಶಿಗೆ ರಾಜೂಗೌಡ ಪತ್ರ:
ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿರುವ ಪಡಿತರ ಅಕ್ಕಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ನರಸಿಂಹ ನಾಯಕ್ (ರಾಜೂಗೌಡ) ಅವರು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಷಿಯವರಿಗೆ ಪತ್ರ ಬರೆದಿದ್ದಾರೆ.
ಮಹಿಳೆಯರು, ಗರ್ಭಿಣಿ ಹಾಗೂ ಮಕ್ಕಳು ಸೇರಿದಂತೆ ಬಡವರಿಗೆ ಅಪೌಷ್ಟಿಕತೆ ನಿವಾರಿಸಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ನೀಡುವ ಆಹಾರಧಾನ್ಯಗಳು ದುರ್ಬಳಕೆಯಾಗಿ, ಕಾಳಸಂತೆಕೋರರ ಪಾಲಾಗುತ್ತಿವೆ. ಅನ್ನಭಾಗ್ಯ ಅಕ್ಕಿ, ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಸೇರಿದಂತೆ ಬಡವರ ಬದುಕಿಗೆ ಅನುಕೂಲವಾಗಲೆಂದು ಸರ್ಕಾರಗಳು ನೀಡುವ ಪಡಿತರಕ್ಕೆ ಕನ್ನ ಹಾಕಲಾಗುತ್ತಿದೆ. ಇದರ ಹಿಂದೆ ವ್ಯವಸ್ಥಿತ ಜಾಲ ಅಡಗಿದ್ದು, ನೂರಾರು ಕೋಟಿ ರು.ಗಳ ಅಕ್ರಮ ವಹಿವಾಟು ನಡೆಯುತ್ತಿದೆ. ಪಡಿತರ ಅಕ್ರಮದಿಂದ ಬಂದ ಕೋಟ್ಯಂತರ ರುಪಾಯಿಗಳ ದುಡ್ಡನ್ನು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ದಂಧೆಕೋರರು ಫಂಡಿಂಗ್ ಮಾಡುತ್ತಿದ್ದಾರೆ. ಆ ಮೂಲಕ, ತಮ್ಮ ಕೃತ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ರಾಜೂಗೌಡ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಮಧ್ಯೆ, ಕೇಂದ್ರದ ಹಿರಿಯ ಅಧಿಕಾರಿಗಳೂ ಸಹ ಯಾದಗಿರಿ ಪ್ರಕರಣದ ವರದಿಯನ್ನು ಪಡೆದು, ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ಜೋಳ, ಹಾಲಿನ ಪೌಡರ್ ಪ್ರಕರಣ ಸಿಐಡಿ ತನಿಖೆಗೆ?:
ಇದೇ ಸೆ.8 ರಂದು ಜಿಲ್ಲೆಯ ಗುರುಮಠಕಲ್‌ನ ಎರಡು ರೈಸ್‌ಮಿಲ್‌ಗಳಲ್ಲಿ ಪತ್ತೆಯಾದ 3,985 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿಗೆ ವಹಿಸಿರುವ ರಾಜ್ಯ ಸರ್ಕಾರ, ಇದೇ ಗುರುಮಠಕಲ್‌ನ ಹತ್ತಿ ಮಿಲ್‌ವೊಂದರ ಗೋದಾಮಿನಲ್ಲಿ ಅ.14 ರಂದು ಪತ್ತೆಯಾದ ಸರ್ಕಾರದ ಜೋಳ ಹಾಗೂ ಶಾಲಾ ಮಕ್ಕಳ ಕ್ಷೀರಭಾಗ್ಯ ಹಾಲಿನ ಪೌಡರ್ ಅಕ್ರಮ ದಾಸ್ತಾನು ಪ್ರಕರಣವನ್ನೂ ಸಹ ಸಿಐಡಿ ತನಿಖೆಗೊಳಪಡಿಸಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
‘ಅನ್ನಭಾಗ್ಯ ಅಕ್ಕಿ ಫಾರಿನ್’ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಕಳೆದ ಹತ್ತಾರು ದಿನಗಳಿಂದ ಗುರುಮಠಕಲ್‌ನಲ್ಲೇ ವಾಸ್ತವ್ಯ ಹೂಡಿ, ಅಕ್ಕಿ ಅಕ್ರಮದ ಮಾಹಿತಿ ಕಲೆ ಹಾಕುತ್ತಿದೆ. ಈ ಮಧ್ಯೆ, ಅ.14 ರಂದು ಸ್ಥಳ ಮಹಜರು ವೇಳೆ, ಅಲ್ಲಿನ ವ್ಹೇ ಬ್ರಿಡ್ಜ್ (ತೂಕ ಯಂತ್ರ) ಸಮೀಪದ ಹತ್ತಿ ಮಿಲ್‌ಗೆ ಸಹಜವಾಗಿ ತೆರಳಿದ್ದ ಸಿಐಡಿ ತಂಡಕ್ಕೆ ಅಲ್ಲಿನ ಗೋದಾಮುಗಳಲ್ಲಿ ಪಡಿತರ ಆಹಾರಧಾನ್ಯಗಳು ಕಂಡಿವೆ.
ಪೊಲೀಸ್ ಸಮ್ಮುಖದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಭಾರಿ ಪ್ರಮಾಣದಲ್ಲಿ ಅನ್ನಭಾಗ್ಯ ಅಕ್ಕಿ ಅಷ್ಟೇ ಅಲ್ಲ, ಜೋಳ ಹಾಗೂ ಶಾಲಾಮಕ್ಕಳಿಗಾಗಿನ ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಹಾಗೂ ಅಂಗನವಾಡಿ ಬಿಸಿಯೂಟದ ದಾಸ್ತಾನು ಸಹ ಕಂಡು ಬಂದಿದ್ದು, ಇದನ್ನು ನೋಡಿ, ಅಧಿಕಾರಿಗಳು ದಂಗಾಗಿದ್ದರು.
ಊಹೆಗೂ ಮೀರಿ, ಭಾರಿ ಪ್ರಮಾಣದಲ್ಲಿ ಸರ್ಕಾರದ ಆಹಾರಧಾನ್ಯಗಳ ದಾಸ್ತಾನು ಪತ್ತೆಯಾಗಿದ್ದರಿಂದ, ಮಂಗಳವಾರದಿಂದ ಶುಕ್ರವಾರ ಸಂಜೆವರೆಗೂ ಎಣಿಕೆ ಕಾರ್ಯ ನಡೆದಿದೆ. ಶುಕ್ರವಾರ ರಾತ್ರಿವರೆಗೂ ಈ ಪ್ರಕ್ರಿಯೆ ನಡೆಯಲಿದ್ದು, ನಂತರದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ನೀಡುವ ದೂರಿನಂತೆ ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.