ಬೆಳ್ತಂಗಡಿ: ಪ್ರಕೃತಿಯ ಸುಂದರ ಮಡಿಲಲ್ಲಿರುವ ಎಳನೀರು ಪ್ರದೇಶದ ಇನ್ನಷ್ಟು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪ್ರವಾಸೋದ್ಯಮದಿಂದ ಪ್ರಕೃತಿಗೆ ಹಾನಿಯಾಗಬಾರದು. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಗುತ್ಯಡ್ಕದಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ಟವರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಸುಮಾರು 13 ಕೋಟಿ ರು.ಗಿಂತ ಅಧಿಕ ವೆಚ್ಚದಲ್ಲಿ ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಶ್ಲಾಘನೀಯ. ದೇಶದ ಅಭಿವೃದ್ಧಿಯಲ್ಲಿ ಹಳ್ಳಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಮುಂದಿನ ದಿನಗಳಲ್ಲಿ ಇಲ್ಲಿ ಹಂತ-ಹಂತವಾಗಿ ಇನ್ನಷ್ಟು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಊರಿನವರು ಒಗ್ಗಟ್ಟಿನೊಂದಿಗೆ ಮುಂದುವರಿದು ಪರಸ್ಪರ ಅನ್ಯೋನ್ಯತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದು ಅಗತ್ಯ ಎಂದರು.

ಮಲವಂತಿಗೆ ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಜೈನ್, ಪ್ರಮುಖರಾದ ಗಣೇಶ್ ನಾವೂರು, ಅರವಿಂದ ಲಾಯಿಲ, ದಿನೇಶ್ ಗೌಡ, ಮಧುಸೂದನ್ ಮಲ್ಲ, ಗಣೇಶ್ ಗೌಡ, ಬಿಎಸ್ಸೆನ್ನೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.


ನೇತ್ರಾವತಿ ಪೀಕ್ ಪರಿಶೀಲನೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ನೇತ್ರಾವತಿ ಪೀಕ್ ಪ್ರದೇಶದ ಪರಿಶೀಲನೆ ನಡೆಸಿದರು. ಸುಮಾರು 10 ಕಿ.ಮೀ. ದುರ್ಗಮ ಪ್ರದೇಶವನ್ನು ಕಾಲ್ನಡಿಗೆ ಮೂಲಕ ಕ್ರಮಿಸಿ ಇಲ್ಲಿನ ಪರಿಸ್ಥಿತಿ ಅವಲೋಕಿಸಿದರು. ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ಕೆಲವೊಂದು ಸಲಹೆ- ಸೂಚನೆಗಳನ್ನು ನೀಡಿದರು. ಇಲ್ಲಿನ ಅಭಿವೃದ್ಧಿ ಕುರಿತು ಯೋಜನೆ ರೂಪಿಸುವುದಾಗಿ ತಿಳಿಸಿದರು.