ಉಡುಪಿ: ದೋಣಿಗಳು ಮತ್ತು ಮೀನುಗಾರಿಕಾ ನೌಕೆಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಪರಿಸ್ಥಿತಿಯಲ್ಲಿ ನದಿ ಮುಖದಲ್ಲಿ ತುಂಬಿರುವ ಮರಳಿನ ದಿಬ್ಬಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಕೇಳಿದ ಲಿಖಿತ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಮೀಕ್ಷೆ ರಾಜ್ಯ ಸಚಿವ ಕೀರ್ತಿವರ್ದನ್ ಸಿಂಗ್, ಸಿಆರ್ ಜೆಡ್ ಅಧಿಸೂಚನೆ 2019ರ ಅಡಿಯಲ್ಲಿ ಪೂರ್ವಭಾವಿ ಅನುಮತಿ‌ ಪಡೆಯುವ ಷರತ್ತಿಗೊಳಪಟ್ಟು ಸಿಆರ್ ಝೆಡ್ 1ಬಿ, ಸಿಆರ್ ಝಡ್ 2 ಮತ್ತು 4 ಪ್ರದೇಶಗಳ ಮರಳಿನ ದಿಬ್ಬಗಳನ್ನು ತೆಗೆಯಲು ಅವಕಾಶವಿದೆ ಎಂದು ಉತ್ತರಿಸಿದ್ದಾರೆ.24.11.2022ರ ತಿದ್ದುಪಡಿ ಅಧಿಸೂಚನೆ ಸಂಖ್ಯೆ 5495ಇ ಸಿಆರ್‌ ಝಡ್ ಅಧಿಸೂಚನೆಯಂತೆ ದ್ವೀಪ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2019ರ ಅಡಿಯಲ್ಲೂ ಯಾಂತ್ರಿಕೇತರ ಸಾಂಪ್ರದಾಯಿಕ, ಕೈ ಕೆಲಸದ ವಿಧಾನಗಳ ಮೂಲಕ ಮರಳಿನ ದಿಬ್ಬಗಳನ್ನು ತೆಗೆಯಲು ಸಚಿವಾಲಯ ಅನುಮತಿ‌ ಇದೆ ಎಂದು ತಿಳಿಸಿದ್ದಾರೆ. ಆಯಾ ರಾಜ್ಯ ಸರ್ಕಾರಗಳು ಕೈಯಿಂದ ಮರಳು ತೆಗೆಯಲು‌ ಅನುಮತಿ ಪಡೆದ ಸಮುದಾಯದ ವ್ಯಕ್ತಿಗಳ ನೋಂದಣಿ ಮತ್ತು ಅದನ್ನು ವಾರ್ಷಿಕವಾಗಿ ನವೀಕರಿಸುವ ಷರತ್ತಿಗೊಳಪಟ್ಟು ನಿರ್ದಿಷ್ಟ ಪ್ರದೇಶದಲ್ಲಿ ನಿಗದಿಪಡಿಸಿದ ಅವಧಿಯಲ್ಲಿ ಮರಳು ತೆಗೆಯಲು ಅನುಮತಿ ನೀಡಬಹುದು ಎಂದು ಕೇಂದ್ರ ಸಚಿವರು ಲಿಖಿತವಾಗಿ ಹೇಳಿದ್ದಾರೆ. ಇದರಿಂದ ಕರಾವಳಿಯಲ್ಲಿ ಬಹು ದಿನಗಳಿಂದ ನನೆಗುದಿಗೆ ಬಿದ್ದ ಸಿಆರ್ ಝೆಡ್ ಮರಳು ತೆಗೆಯುವ ಸಮಸ್ಯೆಗೆ ಕೇಂದ್ರ ಸರಕಾರ ಮಹತ್ವದ ಪರಿಹಾರ ಕೊಟ್ಟಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.