ಅಂಗನವಾಡಿ ಕಾರ್ಯಕರ್ತೆಯರಿಂದ ಸಂಸದರ ಕಚೇರಿ ಚಲೋ

| Published : Jan 24 2024, 02:02 AM IST

ಸಾರಾಂಶ

ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಎಂಡಿಎಂ ಯೋಜನೆಗೆ ಅನುದಾನ ಹೆಚ್ಚಿಸಬೇಕು, ಆಹಾರ,ಆರೋಗ್ಯ, ಶಿಕ್ಷಣ ಯೋಜನೆ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕಲ್ಪಿಸಿ ನೌಕರರೆಂದು ಪರಿಗಣಿಸಬೇಕು, ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು ನಾಲ್ಕು ಗಂಟೆಯಿಂದ ಆರು ಗಂಟೆ ಎಂದು ಬದಲಾಯಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನಿಷ್ಠ ವೇತನ ಘೋಷಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಮಂಡ್ಯದಲ್ಲಿ ಸಂಸದರ ಕಚೇರಿ ಚಲೋ ನಡೆಸಿದರು.

ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಕ್ಷರ ದಾಸೋಹ ನೌಕರರು ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಮೆರವಣಿಗೆ ಹೊರಟು ಸಂಸದರ ಕಚೇರಿ ಇರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು.

ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಎಂಡಿಎಂ ಯೋಜನೆಗೆ ಅನುದಾನ ಹೆಚ್ಚಿಸಬೇಕು, ಆಹಾರ,ಆರೋಗ್ಯ, ಶಿಕ್ಷಣ ಯೋಜನೆ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕಲ್ಪಿಸಿ ನೌಕರರೆಂದು ಪರಿಗಣಿಸಬೇಕು, ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು ನಾಲ್ಕು ಗಂಟೆಯಿಂದ ಆರು ಗಂಟೆ ಎಂದು ಬದಲಾಯಿಸಬೇಕು, ಬಿಸಿಯೂಟ ನೌಕರರಿಗೆ ಪರಿಹಾರ ನೀಡದೆ ನಿವೃತ್ತಿ ಮಾಡಬಾರದು. ಈಗಾಗಲೇ ನಿವೃತ್ತಿಯಾಗಿರುವವರಿಗೆ ಇಡಿಗಂಟು ನೀಡುವಂತೆ ಒತ್ತಾಯಿಸಿದರು.

ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯಡಿ ನಡೆಸಬೇಕು. ವೇತನ ಹೆಚ್ಚಿಸಬೇಕು. ರಾಜ್ಯ ಸರ್ಕಾರ ೬ನೇ ಗ್ಯಾರಂಟಿಯಾಗಿ ೬,೦೦೦ ರು.ಗೆ ವೇತನ ಹೆಚ್ಚಳ ಮಾಡಿ ನಿವೃತ್ತಿ ಸೌಲಭ್ಯ ಕಲ್ಪಿಸಬೇಕು, ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವುದನ್ನು ವಾಪಸ್ ಪಡೆಯಬೇಕು, ೨೦೨೨ರಿಂದ ನಿವೃತ್ತಿಯಾಗಿರುವರಿಗೆ ೧ ಲಕ್ಷ ಇಡುಗಂಟು ಕೊಡಬೇಕು. ಕೆಲಸದ ಅವಧಿಯಲ್ಲಿ ಮೃತರಾದರೆ ೨೫ ಲಕ್ಷ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಸಂಘಟನೆಯ ನಾಗರಾಜು, ಸಿ,ಕುಮಾರಿ, ಕೃಷ್ಣೆಗೌಡ, ಮಹದೇವಮ್ಮ, ಎ.ಬಿ ಶಶಿಕಲಾ, ಎಂ.ಲಕ್ಷ್ಮೀ, ವೆಂಕಟಲಕ್ಷ್ಮೀ, ಪುಟ್ಟಮ್ಮ, ಶೋಭಾ, ವನಜಾಕ್ಷಿ, ಸುಜಾತ ಇತರರಿದ್ದರು.