ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಕುಗ್ರಾಮಗಳ ಸಮಸ್ಯೆ ನೀಗಿಸಲು ಸರ್ಕಾರ ಗಮನಹರಿಸಬೇಕಾಗಿದೆ ಎಂದು ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ರಾಜಗೋಪುರದ ಮುಂಭಾಗ ಸಾಮೂಹಿಕ ನಾಯಕತ್ವದಲ್ಲಿ ಮಲೆ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರದವರೆಗೆ ರೈತರ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕು ಸೇರಿದಂತೆ ರೈತರ ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈತ ಸಂಘಟನೆ ಮಲೆಮಹದೇಶ್ವರ ಸನ್ನಿಧಿಯಿಂದ ಜಿಲ್ಲಾ ಕೇಂದ್ರದವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದು ಸರ್ಕಾರ ಹಾಗೂ ಜನಪ್ರತಿನಿಧಿ ಅಧಿಕಾರಿಗಳ ಗಮನಸೆಳೆದು ಮಲೆಮಹದೇಶ್ವರಬೆಟ್ಟ ಸುತ್ತಮುತ್ತಲಿನಲ್ಲಿ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲು ರೈತರು ಪಾದಯಾತ್ರೆ ಹಮ್ಮಿಕೊಂಡಿರುವುದು ಉತ್ತಮ ಕೆಲಸವಾಗಿದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಜಿಲ್ಲೆಯ ನಾಲ್ಕು ತಾಲೂಕುಗಳ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು 23ರಿಂದ 26ರ ವರೆಗೆ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆಯ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ಣು ತೆರೆಸಲು ತಾಲೂಕಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಈ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದರಿಂದ ಸಾಮೂಹಿಕ ನಾಯಕತ್ವದ ರೈತ ಸಂಘದ ವತಿಯಿಂದ ಹಮ್ಮಿಕೊಂಡಿರುವುದು ಆಯಾ ತಾಲೂಕಿನ ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.ಗುಡ್ಡಗಾಡು ಪ್ರದೇಶ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯ ಕಲ್ಪಿಸುವಂತೆ ಹಾಗೂ ಚಂಗಡಿ ಗ್ರಾಮ ಪುನರ್ವಸತಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆಯುವ ದೊಡ್ಡ ರಾಗಿ ಹಾಗೂ ಬೆಳೆಯುವ ಬೆಳೆಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಬೇಕು ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಗ್ರಾಮಗಳಿಗೆ ಕಲ್ಪಿಸಬೇಕು. ಕಾಡಂಚಿನ ಗ್ರಾಮಗಳಲ್ಲಿ ಮಾನವ ಹಾಗೂ ಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳಬೇಕು. ಮಳೆ ಇಲ್ಲದೆ ತತ್ತರಿಸಿರುವ ಜಿಲ್ಲೆಗೆ ಬರ ಪರಿಹಾರದಡಿ ಹೆಚ್ಚಿನ ಅನುದಾನ ನೀಡಿ, ನೀರಾವರಿ ಯೋಜನೆ ರೂಪಿಸಬೇಕು, ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು
ಹಿರಿಯ ರೈತ ಹೋರಾಟಗಾರ ಕೆ. ಟಿ. ಗಂಗಾಧರ, ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಶಾಲೆಯ ವಿಜ್ಞಾನಿ ಡಾ. ಮಂಜುನಾಥ್, ಹನೂರು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ಮೈಸೂರು ಘಟಕದ ವಿದ್ಯಾಸಾಗರ ಮತ್ತು ತಂಡದವರು ಕೊಳ್ಳೇಗಾಲ ಜೆಎಸ್‌ಪಿ ಪ್ರತಿಷ್ಠಾನದ ಶಶಿಕುಮಾರ್, ಸತ್ತೇಗಾಲ ಪ್ರಗತಿಪರ ಕೃಷಿಕ ಮತ್ತು ಚಿಂತಕ ಪ್ರಶಾಂತ ಜಯರಾಮ್ ಹಾಗೂ ಮಲೆಮಹದೇಶ್ವರ ಬೆಟ್ಟ ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಹಾಗೂ ವಿವಿಧ ತಾಲೂಕಿನಿಂದ ನೂರಾರು ರೈತ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.