ಸಾರಾಂಶ
- 157ನೇ ಜಯಂತ್ಯುತ್ಸವದಲ್ಲಿ ಓಂಕಾರ ಶಿವಾಚಾರ್ಯ ಶ್ರೀ ಅಭಿಮತ । ತುಲಾಭಾರ- ಪ್ರಶಸ್ತಿ ಪ್ರದಾನ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಅಂಧ ವಿದ್ಯಾರ್ಥಿಗಳಿಗೆ ಸಂಗೀತದ ಬೆಳಕು ತೋರಿದವರು ಪಂಚಾಕ್ಷರಿ ಗವಾಯಿ ಹಾಗೂ ಪಂಡಿತ್ ಪುಟ್ಟರಾಜ ಗವಾಯಿಗಳು. ಇವರಿಬ್ಬರಲ್ಲೂ ಸಂಗೀತದ ಬೀಜ ಬಿತ್ತಿದ್ದು ಹಾನಗಲ್ ಕುಮಾರ ಶಿವಯೋಗಿಗಳು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಹೊರವಲಯದ ಬಾಡಾ ಕ್ರಾಸ್‌ನಲ್ಲಿರುವ ಶ್ರಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಅಖಿಲ ಕರ್ನಾಟಕ ಶ್ರೀಗುರು ಕುಮಾರೇಶ್ವರ ಅಂಧ ಸಂಗೀತ ಕಲಾವಿದರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹಾನಗಲ್ ಲಿಂಗೈಕ್ಯ ಶ್ರೀ ಕುಮಾರ ಮಹಾಶಿವಯೋಗಿಗಳ 157ನೇ ಜಯಂತ್ಯುತ್ಸವ, ತುಲಾಭಾರ ಹಾಗೂ ಸ್ವಾಮಿ ಸುಕುಮಾರ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಶಿವಯೋಗ ಮಂದಿರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆಯು ಹಾನಗಲ್ ಕುಮಾರಸ್ವಾಮಿಗಳ ದೂರದೃಷ್ಟಿಗೆ ಸಾಕ್ಷಿಯಾಗಿದೆ. ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟವರು ಹಾನಗಲ್ ಕುಮಾರಸ್ವಾಮಿಗಳು. ಅರಮನೆಯ ಸಂಗೀತವನ್ನು ಗುರುಮನೆಗೆ ತಂದು, ಅಂಧರ ಬಾಳು ಬೆಳಗಿಸುವಲ್ಲಿ ಕಾರಣೀಭೂತರಾದರು ಎಂದರು.
ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಶಿವಯೋಗ ಮಂದಿರದಿಂದ ಗುರು-ವಿರಕ್ತರ ಸಮನ್ವಯತೆ ಸಾಧ್ಯವಾಯಿತು. ಇಂದಿಗೂ ಅಲ್ಲಿ ನೂರಾರು ಸಾಧಕ ವಟುಗಳು ವೇದ, ಸಂಸ್ಕೃತ, ವಚನ ಸಾಹಿತ್ಯ ಅಧ್ಯಯನ ಮಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ತಯಾರು ಮಾಡುವ ಕೇಂದ್ರವಾಗಿ ಶಿವಯೋಗ ಮಂದಿರ ರೂಪುಗೊಂಡಿದೆ. ಅದೇ ರೀತಿ ವೀರಶೈವ ಮಹಾಸಭಾ ಇಡೀ ವೀರಶೈವ ಲಿಂಗಾಯತ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಹಾನಗಲ್ ಕುಮಾರಸ್ವಾಮಿಗಳು ಇಲ್ಲದಿದ್ದರೆ ನಾಡಿನ ಸಾವಿರಾರು ಮಠಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ದವು. ಸಮಾಜದ ಸಂಘಟನೆಗೆ ಹಿನ್ನಡೆ ಉಂಟಾಗುತ್ತಿತ್ತು ಎಂದು ತಿಳಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ವಿ. ಸಂಗಮೇಶ್ವರ ಗವಾಯಿ ಅವರಿಗೆ ಸ್ವಾಮಿ ಸುಕುಮಾರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾಣಿ ನಾಗಭೂಷಣ್, ಎ.ಎಸ್. ಸಿದ್ದಲಿಂಗಸ್ವಾಮಿ ಸೇರಿದಂತೆ ಅನೇಕ ದಾನಿಗಳನ್ನು ಸನ್ಮಾನಿಸಲಾಯಿತು. ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಹೆಗಡೆ, ಕೋನಸಾಗರದ ವಿಜಯಲಕ್ಷ್ಮೀ ಜಿ.ಎಸ್. ಸುರೇಶ್ ಮತ್ತು ಕುಟುಂಬದವರು ತುಲಾಭಾರ ಸೇವೆ ನಡೆಸಿಕೊಟ್ಟರು.
ಅಡ್ನೂರ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ.ಕಲ್ಲಯ್ಯಜ್ಜ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ರಾಜಕುಮಾರ ಮುಲಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂತೋಷ ಬಾಣಿ, ಪುಣ್ಯಾಶ್ರಮದ ಉಪಾಧ್ಯಕ್ಷ ಎ.ಎಸ್.ಮೃತ್ಯುಂಜಯ, ಶಿವಬಸಯ್ಯಸ್ವಾಮಿ ಚರಂತಿಮಠ, ರಘುನಂದನ ಶಾಸ್ತ್ರಿ ಪುಣ್ಯಾಶ್ರಮದ ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಆಂಜನೇಯ ಮಿಲ್‌ನಿಂದ ಪೂಜ್ಯರ ಭಾವಚಿತ್ರ ಮೆರವಣಿಗೆ ನಡೆಯಿತು.- - -
ಬಾಕ್ಸ್ * ಗವಾಯಿಗಳ ಪ್ರತಿಮೆ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ: ಡಾ.ವೀರಣ್ಣ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಡಾ.ಅಥಣಿ ವೀರಣ್ಣ ಮಾತನಾಡಿ, ಆಶ್ರಮಕ್ಕೆ ನೂರಾರು ಜನ ದಾನಿಗಳಿದ್ದಾರೆ. ಶಿಲಾಮಂಟಪ ನಿರ್ಮಾಣಕ್ಕೆ ತುಲಾಭಾರ ಸೇವೆ ನೆರವೇರಿಸಿ ದಾನ ಕೊಟ್ಟವರಿದ್ದಾರೆ. ಅಂತಹ ಎಲ್ಲರ ಹೆಸರು ಜನರಿಗೆ ಗೊತ್ತಾಗುವಂತೆ ಆಶ್ರಮದಲ್ಲಿ ದಾನಿಗಳ ಹೆಸರು ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಪುಟ್ಟರಾಜ ಗವಾಯಿಗಳ ಪ್ರತಿಮೆ ಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ. ದಾನಿಗಳ ದೇಣಿಗೆಯಿಂದ ಆಶ್ರಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ವರ್ಷದ 365 ದಿನವೂ ದಾಸೋಹ ನಡೆಯುವಂತೆ 365 ದಾನಿಗಳನ್ನು ನೋಡುತ್ತಿದ್ದೇವೆ. ಈಗಾಗಲೇ 50 ಮಕ್ಕಳು ಇಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದು, ಇನ್ನೂ 50 ಮಕ್ಕಳಿಗೆ ಆಶ್ರಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇಲ್ಲಿರುವ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕೊಡುವುದು ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದರು.- - - -29ಕೆಡಿವಿಜಿ40ಃ:
ದಾವಣಗೆರೆಯ ಪುಣ್ಯಾಶ್ರಮದಲ್ಲಿ ಆರ್.ವಿ. ಸಂಗಮೇಶ್ವರ ಗವಾಯಿ ಅವರಿಗೆ ಸ್ವಾಮಿ ಸುಕುಮಾರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.