ಸಮಾಜಕ್ಕೆ ದುಡಿದವರ ಮರೆಯುವುದು ಸಲ್ಲ: ದಿನೇಶ್‌ ಶಿರವಾಳ

| Published : Oct 01 2024, 01:15 AM IST

ಸಾರಾಂಶ

ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಕಾಗೋಡು ಸತ್ಯಾಗ್ರಹದ ರೂವಾರಿ ಡಾ.ಎಚ್.ಗಣಪತಿಯಪ್ಪ ಅವರ ೧೦ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಸಾಗರ

ಕಾಗೋಡು ಸತ್ಯಾಗ್ರಹದಿಂದ ಉಪಕೃತರಾದವರು ಚಳವಳಿಯ ಮಹತ್ವ ಮರೆತಿರುವುದು ದುರದೃಷ್ಟಕರ ಸಂಗತಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.

ಪಟ್ಟಣದ ಎಪಿಎಂಸಿ ಪ್ರಾಂಗಣದ ರೈತ ಭವನದಲ್ಲಿ ಸೋಮವಾರ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಕಾಗೋಡು ಸತ್ಯಾಗ್ರಹದ ರೂವಾರಿ ಡಾ.ಎಚ್.ಗಣಪತಿಯಪ್ಪ ಅವರ ೧೦ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಡುವೆ ಸಮಾಜಮುಖಿ ಕೆಲಸ ಮಾಡಿದವರನ್ನು ನಾವು ಮರೆತು ಬಿಡುತ್ತೇವೆ. ಅದರಲ್ಲಿಯೂ ಉಳುವವರಿಗೆ ಭೂಮಿಹಕ್ಕು ಕೊಡಿಸಲು ಅವಿರತವಾಗಿ ಶ್ರಮಿಸಿದ ಡಾ.ಎಚ್.ಗಣಪತಿಯಪ್ಪ ಅವರನ್ನು ಭೂಮಿ ಪಡೆದವರು ಮರೆತರೆ ಅದೊಂದು ದುರಂತವಾಗುತ್ತದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಗಣಪತಿಯಪ್ಪನವರು ಹಾಕಿಕೊಟ್ಟಿರುವ ಹೋರಾಟದ ಮಾರ್ಗ ರೈತ ಸಂಘಕ್ಕೆ ಆದರ್ಶವಾಗಿದೆ. ಅವರ ಹೋರಾಟದ ಕಿಚ್ಚು ಯುವ ಸಮೂಹಕ್ಕೆ ಸ್ಫೂರ್ತಿಯಾಗಬೇಕು. ರೈತ ಸಂಘ ಗಣಪತಿಯಪ್ಪ ಅವರನ್ನು ಆದರ್ಶವಾಗಿ ಇರಿಸಿಕೊಂಡು ಅನೇಕ ಹೋರಾಟ ರೂಪಿಸುತ್ತಿದೆ ಎಂದು ಹೇಳಿದರು.

ಗಣಪತಿಯಪ್ಪ ಅವರ ಪುತ್ರ ಹೊಯ್ಸಳ ಗಣಪತಿಯಪ್ಪ ಮಾತನಾಡಿ, ನಮ್ಮ ತಂದೆಯವರು ನಮಗೆ ಕಲಿಸಿದ ಹೋರಾಟದ ಮಾರ್ಗವನ್ನು ನಾವು ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ದಲಿತರ ಕೇರಿಯಲ್ಲಿ ಅವರ ನೇತೃತ್ವದಲ್ಲಿ ನಡೆದ ಸಹಪಂಕ್ತಿ ಭೋಜನ ಇಂದಿಗೂ ಎಲ್ಲರ ನೆನಪಿನಲ್ಲಿದೆ. ಹೋರಾಟಕ್ಕೆ ಅವರೊಂದು ಆದರ್ಶಪ್ರಾಯರಾಗಿದ್ದರು. ಕುಟುಂಬದ ಹಿತವನ್ನು ಮರೆತು ಅವರು ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ನೆನಪಿಸಿಕೊಂಡರು.

ಕುಮಾರ ಗೌಡ, ಭದ್ರೇಶ್ ಬಾಳಗೋಡು, ಸುರೇಶ್ ಬೆಳಂದೂರು, ಕೃಷ್ಣಮೂರ್ತಿ, ಬಸವರಾಜ್, ಚಂದ್ರು ಇನ್ನಿತರರು ಹಾಜರಿದ್ದರು.