ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣ ವ್ಯಾಪ್ತಿಯಲ್ಲಿ ಕಲುಷಿತ ನೀರು ಪೂರೈಕೆಯಾದರೆ ನಗರಸಭೆ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮಕೈಗೊಳ್ಳಲಾಗುವುದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಾಗೃತರಾಗಿ ನಗರಸಭೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎಆರ್ ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.23ನೇ ವಾರ್ಡ್‌ನ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಕಲುಷಿತ ನೀರು ಪೂರೈಕೆ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಪಡೆದ ಶಾಸಕರು ಮುಂದೆ ಇಂತಹ ಅನಾಹುತ ಸಂಭವಿಸಿದರೆ ಸಂಬಂಧಿಸಿದವರನ್ನೆ ಹೊಣೆಗಾರರನ್ನಾಗಿಸಲಾಗುವುದು, ಈ ವರ್ತನೆ ಮುಂದೆ ಯಾವುದೆ ವಾರ್ಡ್‌ಗಳಲ್ಲೂ ಪುನರಾವರ್ತನೆಯಾಗಕೂಡದು, ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಸಮಸ್ಯೆಯನ್ನು ಪತ್ರಿಕೆ ನೋಡಿ ಅರಿತು ನಾನು ಬಂದಿದ್ದೇನೆ, ಇಲ್ಲಿನ ಸಮಸ್ಯೆ ಬಗ್ಗೆ ಮುಂದೆ ಅಧಿಕಾರಿಗಳೆ ಮುಂಚಿತವಾಗಿ ಮಾಹಿತಿ ನೀಡಬೇಕು, ಪತ್ರಿಕೆಗಳಲ್ಲಿ ವರದಿಯ ನಂತರ ಎಚ್ಚೆತ್ತುಕೊಳ್ಳುವ ಮುನ್ನ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ ಎಂದು ತಾಕೀತು ಮಾಡಿದರು.ನಾನೇ ಇಲ್ಲಿಗೆ ದೊಡ್ಡ ಮೆಂಬರ್: ನೋಡಮ್ಮ 23ನೇ ವಾರ್ಡ್‌ಗೆ ನಾನೇ ದೊಡ್ಡ ಮೆಂಬರ್, ನೀವು ಚಿಕ್ಕಮೆಂಬರ್ ಹಾಗಾಗಿ ನೀವು ಇಲ್ಲಿ ನಿಂತು ಕೆಲಸ ಮಾಡಿಸಬೇಕು, ಸ್ವಚ್ಛತೆ ನಿಟ್ಟಿನಲ್ಲಿ ನಗರಸಭೆ ಗಮನಕ್ಕೆ ತಂದು ಕೆಲಸ ಮಾಡಿಸಿಕೊಳ್ಳಿ, ನೀವು ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ, ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ವಾರ್ಡ್ ಸದಸ್ಯೆ ಜಯಮೇರಿ ಅವರಿಗೆ ಹೇಳಿದರು. ಅಧಿಕಾರಿಗಳು ಸ್ಪಂದಿಸಲ್ಲ, ನಾನು ಹಲವು ಬಾರಿ ದೂರು ನೀಡಿದ್ದೇನೆ ಎಂದು ಶಾಸಕರಿಗೆ ಜಯಮರಿ ತಿಳಿಸುತ್ತಿದ್ದಂತೆ ನಿಮ್ಮನ್ನು ಕಂಡರೆ ಭಯವಿರಬೇಕು, ಬಿಡಿ ಎಂದು ನಕ್ಕರು. ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಗೋಪಾಲ್ ಮಾತನಾಡಿ, ಪಾಚಿ ನೀರು ಪೈಪ್‌ನಲ್ಲಿ ಸೇರಿಸಿಕೊಂಡು ನೀರು ಕಲುಷಿತವಾಗಿದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು. ಮುಂದೆ ಈ ರೀತಿ ನಡೆದರೆ ಸಂಬಂಧಪಟ್ಟವರನ್ನೇ ಹೊಣೆ ಮಾಡಲಾಗುವುದು ಎಂದು ಶಾಸಕರು ಇದೆ ವೇಳೆ ಎಚ್ಚರಿಸಿದರು. ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಶಾ, ರಾಘವೇಂದ್ರ, ಸಿಗ್ಬತ್ ಉಲ್ಲಾ ಇನ್ನಿತರರಿದ್ದರು.
ನಗರಸಭೆ ಕೋಶಾಧಿಕಾರಿ ಭೇಟಿನಗರಸಭೆಯ ಜಿಲ್ಲಾ ಯೋಜನಾ ಇಲಾಖೆಯ ಕೋಶಾಧಿಕಾರಿ ಸುಧಾ ಅವರು ಶಾಸಕ ಎಆರ್ ಕೃಷ್ಣಮೂರ್ತಿ ಅವರು, ಬೆಳಗ್ಗೆ ಭೇಟಿ ನೀಡಿದ ಬಳಿಕ ಸಂಜೆ ಅವರು 23ನೇ ವಾರ್ಡ್‌ನ ಕಲುಷಿತ ನೀರು ಪೂರೈಕೆ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ವಲಯದಲ್ಲಿ ಅಪಸ್ವರಕ್ಕೆ ಕಾರಣರಾಗಿದ್ದಾರೆ. ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಪ್ರಕರಣ ನಡೆದು 2 ದಿನ ಕಳೆದ ಬಳಿಕ ಅವರ ಭೇಟಿ ಚರ್ಚೆಗೆ ಗ್ರಾಸವಾಗಿದ್ದು ಜಿಲ್ಲಾ ಹಂತದ ಅಧಿಕಾರಿ ಸುಧಾ ಅವರ ನಡೆಯನ್ನು ಕಾಂಗ್ರೆಸ್ ಮುಖಂಡ ಅನ್ಸರ್ ಖಂಡಿಸಿದ್ದಾರೆ. ತಹಸೀಲ್ದಾರ್ ಬಸವರಾಜು ಅವರು ಟ್ಯಾಂಕ್ ಪರಿಶೀಲಿಸಿ ಅಂಗನವಾಡಿ ಸ್ಥಿತಿ ಗತಿ ವೀಕ್ಷಿಸಿದ್ದಾರೆ. ಕಲುಷಿತ ನೀರು ಸೇವಿಸಿದವರ ಆರೋಗ್ಯ ವಿಚಾರಿಸಿ ಅವರಿಗೆ ಸ್ಪಂದಿಸಿದ್ದಾರೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದುಕೊಳ್ಳಲಿಲ್ಲ, ಅಸ್ವಸ್ಥರ ಆರೋಗ್ಯ ವಿಚಾರಿಸಲಿಲ್ಲ, ಇಂತಹ ಅಧಿಕಾರಿಗಳಿಂದ ಜಿಲ್ಲಾಭಿವೃದ್ಧಿ, ಜನರ ಸಮಸ್ಯೆ ಹೇಗೆ ಸಾಧ್ಯ ಎಂದು ಅನ್ಸರ್ ಪ್ರಶ್ನಿಸಿದ್ದಾರೆ.