ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳನ್ನು ಈಗಿನಿಂದಲೇ ಸಜ್ಜುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ನೋಡೆಲ್ ಅಧಿಕಾರಿಗಳು ಹಾಗೂ ತಾಲೂಕು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಕಚೇರಿಯ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡೆಲ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಶಾಲೆಗಳಿಗೆ ನೇಮಕಗೊಂಡ ನೋಡಲ್ ಅಧಿಕಾರಿಗಳು, ಬಿಇಒಗಳು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳಿಗೆ ಕಷ್ಟವಿರುವ ಹಾಗೂ ಹಿಂದುಳಿದಿರುವ ವಿಷಯಗಳ ಬಗ್ಗೆ ಪಟ್ಟಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಲು ಸಿದ್ಧಗೊಳಿಸಬೇಕು ಎಂದರು.
ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ಮೂಲಕ ಪ್ರತಿಯೊಬ್ಬರೂ ತಾವು ತೆಗೆದುಕೊಳ್ಳುವ ಸಂಬಳಕ್ಕೆ ನ್ಯಾಯಯುತ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಮನಸಾಕ್ಷಿ ಒಪ್ಪುವ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.ಕಳೆದ ಸಾಲಿನಲ್ಲಿ ಕಡಿಮೆ ಸಾಧನೆ ಮಾಡಿರುವ ಶಾಲೆಗಳನ್ನು ಗುರುತಿಸಿ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಇಲಾಖೆಯಿಂದ ಸರಬರಾಜು ಆಗಿರುವ ಪರ್ಯಾಯ ಶೈಕ್ಷಣಿಕ ಕಾರ್ಯ ಯೋಜನೆಯಂತೆ ತರಗತಿಗಳ ನಿರ್ವಹಣೆ ಹಾಗೂ ಚಟುವಟಿಕೆಗಳನ್ನು ಪರಿಶೀಲಿಸಬೇಕು ಎಂದರು.
ನಿಧಾನಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ಮಾಸಿಕ ಪರೀಕ್ಷೆಗಳನ್ನು ನಡೆಸುವುದು ಹಾಗೂ ಪೋಷಕರ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಅಣಿಗೊಳಿಸಲು ಅಗತ್ಯ ಯೋಜನೆ ರೂಪಿಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಏರ್ಪಡಿಸುವ ಜೊತೆಗೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದರು.ಜಿಲ್ಲೆಯಲ್ಲಿ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಶೇ. 74.54, ಪರೀಕ್ಷೆ 2 ರಲ್ಲಿ 37.94 ರಲ್ಲಿ ಹಾಗೂ ಪರೀಕ್ಷೆ 3 ರಲ್ಲಿ ಶೇ. 42.53 ಫಲಿತಾಂಶವಿದೆ. ಕಳೆದ ಸಾಲಿನಲ್ಲಿ ಉತ್ತಮ ಫಲಿತಾಂಶ ಬಂದಿಲ್ಲ. ಈ ಬಾರಿಯು ಕೂಡ ಇದು ಪುನರಾವರ್ತಿತವಾಗದಂತೆ ಮಕ್ಕಳಲ್ಲಿ ಆತ್ಮ ವಿಶ್ವಾಸ ನೀಡಿ ಉನ್ನತ ಮಟ್ಟದಲ್ಲಿ ಫಲಿತಾಂಶ ಬರುವಂತೆ ಮಾಡಬೇಕು ಎಂದರು.
ನೋಡಲ್ ಅಧಿಕಾರಿಗಳು ತಮಗೆ ದತ್ತು ನೀಡಲಾಗಿರುವ ಶಾಲೆಗಳ ಮುಖ್ಯಸ್ಥರು ಪ್ರತಿ ವಾರ ಸಭೆ ನಡೆಸಿ ಪ್ರತಿ ನಿತ್ಯ ಪರಿಹಾರ ಬೋಧನೆ ಹಾಗೂ ವಿಶೇಷ ತರಗತಿಗಳು ನಡೆಯುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ವಾಟ್ಸಾಪ್ ಹಾಗೂ ಗೂಗಲ್ ಮೀಟ್ ಆಪ್ ಮೂಲಕ ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು ಎಂದರು.ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸಲು ತಾಲೂಕು ಮಟ್ಟದಲ್ಲಿ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಈಗಾಗಲೇ ನೀಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಶಾಲೆಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಪ್ರಗತಿ ಪರಿಶೀಲನ ಸಭೆಯನ್ನು ನಡೆಸಿ ನೋಡಲ್ ಅಧಿಕಾರಿಗಳು ಕೈಗೊಂಡಿರುವ ಪ್ರಗತಿ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಪರೀಕ್ಷೆಗೆ 20659 ಮಂದಿ ನೋಂದಣಿ:ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈ ಬಾರಿ ಒಟ್ಟು 20659 ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೋಂದಣಿಯಾಗಿದ್ದಾರೆ. ಕೆ ಆರ್ ಪೇಟೆ - 2801, ಮದ್ದೂರು 3562, ಮಳವಳ್ಳಿ 3335, ಮಂಡ್ಯ ದಕ್ಷಿಣ ವಲಯ - 3241, ಮಂಡ್ಯ ಉತ್ತರ ವಲಯ 1279, ನಾಗಮಂಗಲ 2399, ಪಾಂಡವಪುರ 1956, ಶ್ರೀರಂಗಪಟ್ಟಣ 2086 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್ ಶಿವರಾಮೇಗೌಡ, ವಿವಿಧ ತಾಲೂಕಿನ ಬಿಇಒಗಳು ಹಾಗೂ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.