ಶಾಸಕ ಪಾಟೀಲಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

| Published : Nov 17 2025, 02:00 AM IST

ಸಾರಾಂಶ

ಗಡಿ ಭಾಗದಲ್ಲಿರುವ ಇಂಡಿ ಮತಕ್ಷೇತ್ರಕ್ಕೆ ಎಂದೋ ಸಚಿವ ಸ್ಥಾನ ನೀಡಬೇಕಿತ್ತು. ಕಾಲ ಕೂಡಿ ಬಂದಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಹೈಕಮಾಂಡ್ ಇಂಡಿಗೆ ಸಚಿವ ಸ್ಥಾನ ನೀಡಬೇಕು.

ಕನ್ನಡಪ್ರಭ ವಾರ್ತೆ ಇಂಡಿ

ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವ ಸ್ಥಾಪನೆ ಆದಾಗಿನಿಂದ ಹಿಡಿದು ಇಲ್ಲಿಯವರೆಗೆ ವಿವಿಧ ಪಕ್ಷದ ಸರ್ಕಾರಗಳು ಬಂದು ಹೋಗಿವೆ. ವಿವಿಧ ಪಕ್ಷದಿಂದ ಇಂಡಿ ಮತಕ್ಷೇತ್ರಕ್ಕೆ ಶಾಸಕರು ಆಗಿ ಹೋಗಿದ್ದಾರೆ. ಅವರಲ್ಲಿ ಯಾರಿಗೂ ಸಚಿವ ಸ್ಥಾನ ನೀಡಿಲ್ಲ. ಈಗಲಾದರೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನವನ್ನು ಕಾಂಗ್ರೆಸ್‌ ಹೈಕಮಾಂಡ್ ನೀಡಬೇಕು. ಇಂಡಿಗೆ ಸಚಿವ ಸ್ಥಾನ ನೀಡಿದರೆ ಇತಿಹಾಸ ನಿರ್ಮಾಣವಾಗುತ್ತದೆ ಎಂದು ವಿವಿಧ ಮಠಗಳ ಶ್ರೀಗಳು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಂಥನಾಳದ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳು, ತಡವಲಗಾ ಮಠದ ಅಭಿನವ ರಾಚೋಟೇಶ್ವರ ಶ್ರೀ, ಗೋಳಸಾರ ಮಠದ ಅಭಿನವ ಪುಂಡಲಿಂಗ ಶ್ರೀ, ಖೇಡಗಿ ಮಠದ ಶಿವಬಸವರಾಜೇಂದ್ರ ಶ್ರೀ, ಆಳೂರ ಮಠದ ಶಂಕರಾನಂದ ಶ್ರೀಗಳು ಜಂಟಿಯಾಗಿ ಆಗ್ರಹಿಸಿದ್ದಾರೆ. ಇಂಡಿಗೆ ಹಿಂದೆಂದೂ ದೊರೆಯದ ಸಚಿವ ಸ್ಥಾನ ನೀಡಿದರೆ ಇತಿಹಾಸ ದಾಖಲಾಗುತ್ತದೆ. ಶಾಸಕರಾದ ಯಶವಂತರಾಯಗೌಡ ಪಾಟೀಲಗೆ ಫಲ ಸಿಗಲಿ. ಸಚಿವ ಸ್ಥಾನ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

ಗಡಿ ಭಾಗದಲ್ಲಿರುವ ಇಂಡಿ ಮತಕ್ಷೇತ್ರಕ್ಕೆ ಎಂದೋ ಸಚಿವ ಸ್ಥಾನ ನೀಡಬೇಕಿತ್ತು. ಕಾಲ ಕೂಡಿ ಬಂದಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಹೈಕಮಾಂಡ್ ಇಂಡಿಗೆ ಸಚಿವ ಸ್ಥಾನ ನೀಡಬೇಕು. ಮತದಾರರಿಗೆ ಗೌರವಿಸಲು ಹಿಂದುಳಿದ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಗಡಿ ತಾಲೂಕಾದ ಇಂಡಿ, ಅತಿ ಹಿಂದುಳಿದ ತಾಲೂಕಾಗಿದೆ. ರಾಜಕೀಯ ಅವಕಾಶ ವಂಚಿತವಾಗಿದೆ. ಈಗಲಾದರೂ ಸಚಿವ ಸಂಪುಟದಲ್ಲಿ ಇಂಡಿಗೆ ಸಚಿವ ಸ್ಥಾನ ನೀಡಿದರೆ ಶಾಸಕರಿಗೆ ಅಷ್ಟೇ ಅಲ್ಲ, ಮತದಾರರಿಗೂ ಗೌರವ ನೀಡಿದಂತಾಗುತ್ತದೆ. ದಕ್ಷಿಣ ಕರ್ನಾಟಕ‌ ಭಾಗದ ತಾಲೂಕು ಹಾಗೂ ಕ್ಷೇತ್ರಗಳಿಗೆ ಕೊಡುವಷ್ಟು ರಾಜಕೀಯ ಪ್ರಾತಿನಿಧ್ಯ ಉತ್ತರ ಕರ್ನಾಟಕ ಅದರಲ್ಲೂ ವಿಜಯಪುರ ಜಿಲ್ಲೆಯ ಗಡಿ ಭಾಗ ಇಂಡಿ ಮತಕ್ಷೇತ್ರಕ್ಕೆ ನೀಡುತ್ತಿಲ್ಲ. ಮತದಾರರಿಗೆ ಗೌರವಿಸಬೇಕಾದರೆ ಇಂಡಿಗೆ ಸಚಿವ ಸ್ಥಾನ ನೀಡಬೇಕು ಎಂದು ತಿಳಿಸಿದ್ದಾರೆ.

ಮತಕ್ಷೇತ್ರಕ್ಕೆ ಹಿಂದಿನಿಂದಲೂ ಸಚಿವ ಸ್ಥಾನ ಸಿಗದೆ ವಂಚಿತಗೊಂಡಿದೆ. 50 ವರ್ಷವಾದರೂ ಇಂಡಿಗೆ ಸಚಿವ ಸ್ಥಾನ ಲಭಿಸಿರುವುದಿಲ್ಲ. ಇಂಡಿ ಭಾಗದ ಪ್ರಧಾನ ಗಣ್ಯವ್ಯಕ್ತಿಗಳು ಸಚಿವ ಸ್ಥಾನದಿಂದ ವಂಚಿತಗೊಂಡಿದ್ದಾರೆ. ಉತ್ತರ ಕರ್ನಾಟಕದ ಗಂಡುಮೆಟ್ಟಿನ ಭಾಗ ಇಂಡಿ ತಾಲೂಕು. ಸಜ್ಜನ ವ್ಯಕ್ತಿ ಯಶವಂತರಾಯಗೌಡ ಪಾಟೀಲ ಅವರಿಗೆ ಈ ಸರ್ಕಾರ ಸಚಿವ ಸ್ಥಾನ ನೀಡಲೇಬೇಕು ಎಂದು ಪಕ್ಷದ ವರಿಷ್ಠರಿಗೆ ಆಗ್ರಹಿಸುವೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡಲು ಗಡಿಭಾಗ ಇಂಡಿಯ ಜನಪ್ರತಿನಿಧಿಗಳಿಗೂ ಅವಕಾಶ ನೀಡಬೇಕು. ವಿಜಯಪುರ ಜಿಲ್ಲೆಯಲ್ಲಿಯೇ ಇಂಡಿ ದೊಡ್ಡ ತಾಲೂಕು. ಅದು ಗಡಿ ಭಾಗದಲ್ಲಿ ವಿವಿಧ ಕ್ಷೇತ್ರಗಳಿಂದ ಅಭಿವೃದ್ಧಿ ಕಾಣದೇ ವಂಚಿತಗೊಂಡಿದೆ. ಒಮ್ಮೆಯೂ ಸಚಿವ ಸ್ಥಾನ ಯಾವ ಪಕ್ಷವೂ, ಯಾವ ಸರ್ಕಾರಗಳು ನೀಡಿಲ್ಲ. ಹೀಗಾಗಿ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿದರೆ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ವರಿಷ್ಠರು ಸಚಿವ ಸ್ಥಾನ ನೀಡಿ ಈ ಭಾಗದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಇಂಡಿಯು ಶರಣರು, ಸಂತರು ಜನಸಿದ ಪುಣ್ಯಭೂಮಿಯಾಗಿದೆ. ಸಜ್ಜನ ರಾಜಕಾರಣಿಗಳು ಇಲ್ಲಿ ಜನ್ಮವೆತ್ತಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಸಂದರ್ಭ ಬಂದರೆ ಸಚಿವ ಸ್ಥಾನ ವಂಚಿತ ಇಂಡಿಗೆ ಅವಕಾಶ ನೀಡಬೇಕು. ಹಿಂದುಳಿದ ಗಡಿ ತಾಲೂಕು ಸರ್ವತೋಮುಖ ಅಭಿವೃದ್ಧಿ ಸಾಧಿಸಲು ರಾಜಕೀಯ ಪ್ರಾತಿನಿಧ್ಯದಲ್ಲಿ ಸಚಿವ ಸ್ಥಾನ ಮುಖ್ಯ. ಹೀಗಾಗಿ ಈ ಭಾಗ ಸರ್ವ ಕ್ಷೇತ್ರದಲ್ಲಿ ಅಭಿಸಾಧಿಸಲು ಇಂಡಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.