ಕಬ್ಬಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ; 10 ರೈತರ ವಶಕ್ಕೆ ಪಡೆದು ಬಿಡುಗಡೆ

| Published : Nov 17 2025, 02:00 AM IST

ಕಬ್ಬಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ; 10 ರೈತರ ವಶಕ್ಕೆ ಪಡೆದು ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮಹಾಲಿಂಗಪುರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ ಐಆರ್ ದಾಖಲಿಸಿ ತನಿಖೆ ಮುಂದುವರಿಸಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮಹಾಲಿಂಗಪುರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ ಐಆರ್ ದಾಖಲಿಸಿ ತನಿಖೆ ಮುಂದುವರಿಸಿದೆ.

ಎಫ್ ಐ ಆರ್ 1ರಲ್ಲಿ ತೇರದಾಳ ಪಿಎಸ್ ಐ ಶಿವಾನಂದ ಸಿಂಗನ್ನವರ ನೀಡಿದ ದೂರಿನ ಮೇರೆಗೆ ಹೋರಾಟದ ಮುಂದಾಳತ್ವ ವಹಿಸಿದ್ದ 17 ಜನರ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಸುಭಾಸ ಶಿರಬೂರ, ಈರಪ್ಪ ಹಂಚಿನಾಳ, ಮುತ್ತಪ್ಪ ಕೋಮಾರ, ಹನುಮಂತಗೌಡ ಪಾಟೀಲ, ದುಂಡಪ್ಪ ಯರಗಟ್ಟಿ, ಬಸಪ್ಪ ಸಂಗಣ್ಣವರ, ಸುರೇಶ ಚಿಂಚಲಿ, ಸದಾಶಿವ ಸಕರೆಡ್ಡಿ, ರಾಚಪ್ಪ ಕಲ್ಲೊಳ್ಳಿ, ಗಂಗಾಧರ ಮೇಟಿ, ಮಹೇಶಗೌಡ ಪಾಟೀಲ, ಹನುಮಂತ ನಬಾಬ್ ಸೇರಿದಂತೆ ಸೇರಿದಂತೆ 17 ಜನರ ವಿರುದ್ಧ ಸಾರ್ವಜನಿಕ ಆಸ್ತಿ ಹಾನಿಯಡಿ ಎಫ್‌ ಐಆರ್‌ ದಾಖಲಿಸಲಾಗಿದೆ.

ಎಫ್ ಐಆರ್ 2ರಲ್ಲಿ ಕಾರ್ಖಾನೆ ಸಿಬ್ಬಂದಿ ಕಾರ್ಖಾನೆ ಸಿಬ್ಬಂದಿ ಮಲ್ಲಿಕಾರ್ಜುನ ಗುಗ್ಗರಿ ನೀಡಿದ ದೂರಿನ ಮೇರೆಗೆ 100-150 ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಕಾರ್ಖಾನೆ ಆವರಣದೊಳಗೆ ನುಗ್ಗಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಬೈಕ್ ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಎಫ್ ಐ ಆರ್-3ರಲ್ಲಿ ಸಮೀರವಾಡಿ ಕಾರ್ಖಾನೆ ಬೆಂಬಲಕ್ಕೆ ಬಂದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ, ಪೊಲೀಸರಿಗೆ ಗಾಯ, ಪೊಲೀಸ್ ವಾಹನ ಜಖಂ ಗೊಳಿಸಿದ ಆರೋಪ ಮಾಡಲಾಗಿದ್ದು, ಕಾರ್ಖಾನೆ ಪರವಾದ ಗುಂಪಿನ 5 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.ಮಹಾಲಿಂಗಪುರ ಪಿಎಸ್ ಐ ಕಿರಣ ಸತ್ತಿಗೇರಿ ಅವರ ದೂರಿನ ಮೇರೆಗೆ ಕರ್ತವ್ಯನಿರತ ಎಎಸ್ಪಿ ಮಹಾಂತೇಶ್ವರ ಜಿದ್ದಿ, ಬನಹಟ್ಟಿ ಸಿಪಿಐ ಎಚ್.ಆರ್. ಪಾಟೀಲ, ತೇರದಾಳ ಪಿ.ಎಸ್. ಶಿವಾನಂದ ಸಿಂಗನ್ನವರ ಕರ್ತವ್ಯದ ಮೇಲೆ ಇದ್ದಾಗ ತಳ್ಳಾಟ, ನೂಕಾಟ ಮಾಡಿ ಕಲ್ಲು ತೂರಾಟ ನಡೆಸಿ ಕೊಲೆ ಮಾಡಲು ಯತ್ನಿಸಲಾಗಿದೆ ಎಂದು ಪ್ರಭು ತಂಬೂರಿ, ಯಂಕಪ್ಪ ಕೇದಾರಿ, ವಿಠಲ ಹೊಸಮನಿ, ದಸ್ತಗಿರಿ ಸಾಬ್ ನದಾಫ್, ಶಿವಲಿಂಗ ಶಿಂಧೆ ಸೇರಿದಂತೆ 150 ಜನರ ವಿರುದ್ಧ ಎಫ್ ಐಆರ್‌ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

ಕಬ್ಬಿಗೆ ಯೋಗ್ಯ ಬೆಲೆಗಾಗಿ ಮುಧೋಳದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಮುಧೋಳ ರೈತರು ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಹೋಗಿದ್ದ ವೇಳೆ ನ.13ರಂದು 70ಕ್ಕೂ ಅಧಿಕ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಕಲ್ಲು ತೂರಾಟ ನಡೆದಿತ್ತು. ಎಎಸ್ಪಿ ಮಹಾಂತೇಶ್ವರ ಜಿದ್ದಿ ಸೇರಿ ಹಲವರಿಗೆ ಗಾಯಗಳಾಗಿದ್ದವು.

ರೈತ ಮುಖಂಡರ ಆಕ್ರೋಶ:

ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನ ಕಬ್ಬು ಬೆಳೆಗಾರ ರೈತರು ಹಾಗೂ ರೈತ ಮುಖಂಡರ ಮೇಲೆ ಎಫ್.ಐ.ಆರ್ ದಾಖಲಿಸಿರುವುದಕ್ಕೆ ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರದ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಬಂಧನ ಹಿನ್ನೆಲೆ ಭಾನುವಾರ ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಜಿಎಲ್.ಬಿಸಿ ಪ್ರವಾಸಿ ಮಂದಿರದಲ್ಲಿ ರೈತರು ತುರ್ತು ಸಭೆ ನಡೆಸಿದರು.

ಕಬ್ಬು ಬೆಳೆಗಾರ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ನಮ್ಮ ಮೇಲೆ ಕೇಸ್ ಹಾಕಿದ್ದಾರೆ, ಹಾಕಲಿ ಒಳ್ಳೆಯ ವಿಚಾರ, ನಾವೆಲ್ಲ ಸಾವಿರಾರು ಜನ ರೈತರು ಜೈಲಿಗೆ ಬರಲು ತಯಾರಿದ್ದೇವೆ, ಸಿಎಂ ಸಿದ್ದರಾಮಯ್ಯ ಸರ್ಕಾರ ನಡೆಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಜಿಲ್ಲೆಯ ನಿರಾಣಿ, ಜೆಮ್ ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿದಾಗ ನಡೆಯದ ಗಲಾಟೆ. ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿದಾಗ ಏಕೆ ನಡೆಯಿತು ಎಂದು ಪ್ರಶ್ನಿಸಿರುವ ರೈತರು, ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಲ್ಲು ತೂರಾಟ ಮಾಡಿದವರ್‍ಯಾರು ಎಂಬುದು ವೀಡಿಯೋ ದೃಶ್ಯಾವಳಿ, ಫೋಟೋಗಳಲ್ಲಿದೆ. ನಾವು ಸಕ್ಕರೆ ಕಾರ್ಖಾನೆಯಿಂದ ಇನ್ನೂ ಒಂದು ಕಿ.ಮೀ ದೂರ ಇರುವಾಗಲೇ ಕಲ್ಲು ಬಿದ್ದಿವೆ. ಸಕ್ಕರೆ ಕಾರ್ಖಾನೆಯವರು ಬಾಕಿ ಕೊಡಲಾರದೇ ಸಕ್ಕರೆ ಕಾರ್ಖಾನೆ ಆರಂಭಿಸಿ, ಪೂಜೆ ಮಾಡಿದ್ದಾರೆ. ಅದನ್ನು ಪ್ರಶ್ನಿಸಲು ಹೋಗಿದ್ದೆವು. ನಾವು ಕಾರ್ಖಾನೆಯಿಂದ ದೂರ ಇರುವಾಗಲೇ ಕಲ್ಲು ತೂರಾಟವಾಗಿದೆ. ಇದರಲ್ಲಿ ತಂತ್ರಗಾರಿಕೆ ಅಡಗಿದೆ ಎಂದು ಆರೋಪಿಸಿದರು.