ಮಂಗಳೂರು ಕಂಬಳದಲ್ಲಿ ಇತ್ತೀಚೆಗೆ ನಡೆದ ಅನಿರೀಕ್ಷಿತ ಘಟನೆಯ ಹಿನ್ನೆಲೆಯಲ್ಲಿ ಮುಚೂರು ಲೋಕೇಶ್ ಶೆಟ್ಟಿ ಅವರು ವೇದಿಕೆಯಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದರು.

ಬಹಿರಂಗವಾಗಿ ಕ್ಷಮೆ ಕೇಳಿದ ಮುಚೂರು ಲೋಕೇಶ್ ಶೆಟ್ಟಿ

ಕಾರ್ಕಳ: ಮಂಗಳೂರು ಕಂಬಳದಲ್ಲಿ ಇತ್ತೀಚೆಗೆ ನಡೆದ ಅನಿರೀಕ್ಷಿತ ಘಟನೆಯ ಹಿನ್ನೆಲೆಯಲ್ಲಿ ಮುಚ್ಚೂರು ಲೋಕೇಶ್ ಶೆಟ್ಟಿ ಅವರು ವೇದಿಕೆಯಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದರು. ಈ ಘಟನೆ ತಮ್ಮಿಂದ ತಿಳಿದೋ ತಿಳಿಯದೆಯೋ ಸಂಭವಿಸಿದ್ದು, ಅದರ ಬಗ್ಗೆ ಮನಸ್ಸಿಗೆ ತುಂಬಾ ನೋವಾಗಿದೆಯೆಂದು ಅವರು ಸ್ಪಷ್ಟಪಡಿಸಿದರು. ಕಂಬಳದಂತಹ ಪವಿತ್ರ ಸಂಪ್ರದಾಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದಲೇ ತಮ್ಮ ತಪ್ಪನ್ನು ಒಪ್ಪಿಕೊಂಡು, ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಿರುವುದಾಗಿ ಹೇಳಿದರು.ಗುಣಪಾಲ ಕಡಂಬ ಅವರು ಈ ವಿಚಾರದಿಂದ ಮನಸ್ಸಿಗೆ ಬೇಸರಗೊಂಡಿದ್ದರೆ, ಅವರನ್ನು ಓರ್ವ ಮಾರ್ಗದರ್ಶಕನಂತೆ ಭಾವಿಸಿ ದಯವಿಟ್ಟು ಕ್ಷಮಿಸಬೇಕೆಂದು ಮುಚೂರು ಲೋಕೇಶ್ ಶೆಟ್ಟಿ ವಿನಂತಿಸಿದರು. “ಏನೋ ಒಂದು ನಡೆದುಹೋಯಿತು. ಕ್ಷಮೆ ಕೇಳುವುದರಿಂದ ನಾನು ಚಿಕ್ಕವನಾಗುವುದಿಲ್ಲ. ನಿಮ್ಮ ಆಶೀರ್ವಾದ ಯಾವತ್ತೂ ನನಗೆ ಬೇಕು ಎಂದು ಅವರು ಭಾವೋದ್ರಿಕ್ತವಾಗಿ ನುಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರ ಬಳಿಯಲ್ಲಿಯೂ ಅವರು ಕ್ಷಮೆಯಾಚಿಸಿದರು.ಸಹಸ್ರಾರು ಕಂಬಳಾಭಿಮಾನಿಗಳಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ನಿಷ್ಠೆ, ಶ್ರದ್ದೆ ಮತ್ತು ಜವಾಬ್ದಾರಿಯಿಂದ ಸಮಿತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ಕಂಬಳವು ಕೇವಲ ಕ್ರೀಡೆಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗೌರವದ ಸಂಕೇತ ಎಂದು ಅವರು ಹೇಳಿದರು.

ಮುಚೂರು ಲೋಕೇಶ್ ಶೆಟ್ಟಿಯ ಈ ಬಹಿರಂಗ ಕ್ಷಮೆಯಾಚನೆಗೆ ವೇದಿಕೆಯಲ್ಲಿ ಹಾಜರಿದ್ದ ಗಣ್ಯರು ಹಾಗೂ ಕಂಬಳಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳುವ ಧೈರ್ಯವೇ ದೊಡ್ಡತನದ ಲಕ್ಷಣ ಎಂದು ಹಲವರು ಅಭಿಪ್ರಾಯಪಟ್ಟರು.