ದೈಹಿಕ, ಮಾನಸಿಕ ಬೌದ್ಧಿಕ ಆರೋಗ್ಯಕ್ಕೆ ಯೋಗ ಒಂದು ಉತ್ತಮ ಆಯ್ಕೆ.
ಒಂದು ದಿನದ ಉಚಿತ ಕಾಯಕಲ್ಪ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಭಟ್ಕಳದೈಹಿಕ, ಮಾನಸಿಕ ಬೌದ್ಧಿಕ ಆರೋಗ್ಯಕ್ಕೆ ಯೋಗ ಒಂದು ಉತ್ತಮ ಆಯ್ಕೆ. ಯೋಗದಿಂದ ರೋಗ ಮುಕ್ತಿ ಎಂದು ಉತ್ತರಕೊಪ್ಪ ವನವಾಸಿ ಕಲ್ಯಾಣ ಕೇಂದ್ರದ ನಿರ್ವಾಹಕ ರಾಮಚಂದ್ರ ಹೇಳಿದರು.
ಉತ್ತರಕೊಪ್ಪದ ವನವಾಸಿ ಕಲ್ಯಾಣ ಕೇಂದ್ರದಲ್ಲಿ ಭಟ್ಕಳದ ಯೋಗ ಗುರುಜೀ ಗೋವಿಂದ ಗುರೂಜಿಯವರ ನೇತೃತ್ವದಲ್ಲಿ ನಡೆದ ಒಂದು ದಿನದ ಉಚಿತ ಕಾಯಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರವೂ ಅತಿ ಮುಖ್ಯ. ಕ್ರಮಬದ್ಧ ಹಾಗೂ ಹಿತ ಮಿತವಾದ ಆಹಾರ ಪದ್ದತಿಯೊಂದಿಗೆ ಯೋಗವನ್ನು ಅಳವಡಿಸಿಕೊಂಡರೇ ಜೀವನದಲ್ಲಿ ಅತ್ಯಂತ ಮಹತ್ವದ ಭಾಗ್ಯವಾದ ಆರೋಗ್ಯ ಭಾಗ್ಯ ಪಡೆದುಕೊಳ್ಳಬಹುದು. ಉತ್ತಮ ಆಹಾರ ಪದ್ದತಿಯೊಂದಿಗೆ ಯೋಗವನ್ನು ಅಳವಡಿಸಿಕೊಂಡರೇ ದೈಹಿಕ ಹಾಗೂ ಮಾನಸಿಕ ನೆಮ್ಮದಿಯೊಂದಿಗೆ ಉತ್ತಮ ಆರೋಗ್ಯ ದೊರೆಯುವುದು ಎಂದರು.ಸಂಘ ಪ್ರಚಾರಕ ಪ್ರತಾಪ ಪೂನೆ ಮಾತನಾಡಿ, ಬಿಡುವಿಲ್ಲದ ಜೀವನದಲ್ಲಿ ನಮ್ಮ ಬದುಕಿಗಾಗಿ ದುಡಿಯುತ್ತ ತಮ್ಮ ಸುಖಕ್ಕಾಗಿ ಸಂಪತ್ತು ಕೂಡಿ ಹಾಕುವುದರಲ್ಲಿ ಯಾವ ಸಾರ್ಥಕತೆ ಇದೆ. ನಮ್ಮ ಬದುಕಿನೊಂದಿಗೆ ನಮ್ಮ ಸುತ್ತಲಿನ ಸಮಾಜದ ಸ್ವಾಶ್ತ್ಯದೆಡೆಗೂ ಗಮನ ಕೊಡಬೇಕು. ನಮ್ಮ ಬಿಡುವಿಲ್ಲದ ಬದುಕಿನಲ್ಲೂ ನಮ್ಮ ಸುತ್ತಲಿನ ಸಮಾಜಕ್ಕೆ ಸೇವೆ ಸಲ್ಲಿಸುವ ಹಾಗೂ ಅವರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ ಸಮಾಜ ಸೇವೆಯ ಮಹತ್ವದ ಕುರಿತು ಸಂಸ್ಕಾರ ತುಂಬಬೇಕು ಎಂದರು.
ವನವಾಸಿ ಕಲ್ಯಾಣ ಕೇಂದ್ರದ ಸಮಾಜ ಸೇವಾ ವಿಭಾಗದ ಅಧ್ಯಕ್ಷ ಮಾಸ್ತಿ ಗೊಂಡ, ಗೋವಿಂದ ಗುರುಜಿ ಮಾತನಾಡಿದರು.ಶಿಬಿರದಲ್ಲಿ ತಾಲೂಕಿನ ವಿವಿಧ ಭಾಗದಲ್ಲಿ ನಡೆಯುವ ಯೋಗ ಕೇಂದ್ರದಿಂದ ಆಸಕ್ತ ನೂರಕ್ಕೂ ಅಧಿಕ ಯೋಗಾಶಕ್ತರು ಕಾಯಕಲ್ಪ ಶಿಬಿರದಲ್ಲಿ ಪಾಲ್ಗೊಂಡು ಹಲವರು ತಮ್ಮಅಭಿಪ್ರಾಯ, ಅನುಭವ ಹಂಚಿಕೊಂಡರು. ಶ್ರೀ ನಾಗಮಾಸ್ತಿ ಯೋಗ ಕೇಂದ್ರದ ಪ್ರಮುಖ ಸತೀಶಕುಮಾರ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.