ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಅತಿವೇಗದ ವಾಹನ ಚಾಲನೆ, ವೀಲಿಂಗ್, ಡ್ರಿಂಕ್ ಅಂಡ್ ಡ್ರೈವ್ ಗಳ ದುಷ್ಪರಿಣಾಮ
ಕನ್ನಡಪ್ರಭ ವಾರ್ತೆ ಮೈಸೂರು
ವಾಹನದ ಮಾಲೀಕರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡುವ ಸೇವೆಗಳಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ಆನ್ ಲೈನ್ ಮೂಲಕ ಮನೆಯಲ್ಲಿ ಕುಳಿತು ಅರ್ಜಿಗಳನ್ನು ಸಲ್ಲಿಸಿ ನೇರವಾಗಿ ಸೇವೆಗಳನ್ನು ಪಡೆಯಬಹುದು ಎಂದು ಉಪ ಸಾರಿಗೆ ಆಯುಕ್ತ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಈಶ್ವರ್ ಚವ್ಹಾಣ್ ತಿಳಿಸಿದರು.ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವು ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ಮಾಸವನ್ನು ಆಚರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಅತಿವೇಗದ ವಾಹನ ಚಾಲನೆ, ವೀಲಿಂಗ್, ಡ್ರಿಂಕ್ ಅಂಡ್ ಡ್ರೈವ್ ಗಳ ದುಷ್ಪರಿಣಾಮಗಳು ಹಾಗೂ ಕಾನೂನಿನ ಮೂಲಕ ವಿಧಿಸಬಹುದಾದ ಶಿಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.ಕರ್ನಾಟಕ ರಾಜ್ಯದಲ್ಲಿ ರಸ್ತೆ ಅಪಘಾತದಿಂದ ಕಳೆದ ವರ್ಷ 28 ಸಾವಿರ ಸಾವು ನೋವುಗಳು ಉಂಟಾಗಿವೆ. ಸಂಚಾರ ನಿಯಮ ಪಾಲನೆ ಮಾಡಿದರೆ ಬಹಳಷ್ಟು ಸಾವು ನೋವನ್ನು ತಡೆಗಟ್ಟಬಹುದು ಎಂದರು. 26 ಸೇವೆಗಳು ಆನ್ ಲೈನ್ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಡಿಎಲ್ ಹಾಗೂ ಎಲ್ಎಲ್ಆರ್ ಸೇರಿದಂತೆ 26 ಹೆಚ್ಚಿನ ಸೇವೆಯನ್ನು ಆನ್ ಲೈನ್ ಮೂಲಕ ನೀಡಲಾಗುತ್ತಿದೆ. ವಾಹನ ತಂತ್ರಾಂಶಕ್ಕೆ ಸೇವೆಗಳಾದ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ತೆರಿಗೆ ಪಾವತಿ, ಕರಾರು ಒಪ್ಪಂದ ಹಾಗೂ ರದ್ಧತಿ, ತೆರಿಗೆ ತೀರುವಳಿ ಪತ್ರ ನೀಡಿಕೆ. ನಕಲು ನೋಂದಣಿ ಪತ್ರ, ನೋಂದಣಿ ಪತ್ರ ನವೀಕರಣಗಳಂತ ವಿವಿಧ ಸೇವೆಗಳನ್ನು ಆನ್ ಲೈನ್ ಗೊಳಿಸಲಾಗಿದೆ ಎಂದು ಅವರು ವಿವರಿಸಿದರು.ವಾಹನದ ಮಾಲೀಕರು ಇಲಾಖೆಯಲ್ಲಿ ನೀಡುವ ಸೇವೆಗಳಿಗೆ ಸಂಬಂಧಿಸಿದಂತೆ ಆರಂಭದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಂಡು ಆಧಾರ್ ಓಟಿಪಿ ಆಧಾರದ ಮೇಲೆ ಅರ್ಜಿ ಸಲ್ಲಿಸಿ, ದಾಖಲಾತಿಗಳನ್ನು ಅಪ್ಡೇಟ್ ಮಾಡಿ, ಶುಲ್ಕ ಪಾವತಿಸಿ ಕಚೇರಿಯಲ್ಲಿ ಸಲ್ಲಿಸಿ ನೇರವಾಗಿ ಸೇವೆಗಳನ್ನು ಪಡೆಯಬಹುದು ಎಂದರು.ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಆಗಿರುವ ಸಾರಿಗೆ ವಾಹನಗಳ ಸಂಖ್ಯೆ 55742 ಆಗಿದ್ದು, ಸಾರಿಗೇತರ ವಾಹನಗಳು 1163369 ವಾಹನಗಳು ನೊಂದಣಿಯಾಗಿದ್ದು, ಒಟ್ಟು ಮೈಸೂರು ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಹನಗಳ ಸಂಖ್ಯೆ 1215212 ವಾಹನಗಳು ಕಚೇರಿಯಲ್ಲಿ ನೋಂದಣಿಯಾಗಿವೆ ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ 60 ಹೆಚ್ಚು ಸ್ಲೀಪರ್ ಬಸ್ ಗಳು ತಪಾಸಣೆ ಮಾಡಲಾಗುತ್ತಿದೆ. ಬಸ್ ಗಳಲ್ಲಿ ಅಳವಡಿಸಿರುವ ಸುರಕ್ಷತಾ ಪರಿಕರಗಳ ತಪಾಸಣೆಯನ್ನು ಸಾರಿಗೆ ಸಚಿವರ ಸೂಚನೆ ಮೇರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಬಸ್ ಗಳಲ್ಲಿ ಮುತ್ತಿದ್ದೇವೆ. ಈ ಸಂಬಂಧ 16 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದರು.ಎ.ಆರ್.ಟಿ.ಒ ರಾಮಚಂದ್ರ ಇದ್ದರು.----ಕೋಟ್...ಅಪಘಾತ ಪ್ರಕರಣದಲ್ಲಿ ಮೈಸೂರು ಟಾಪ್ 10 ಒಳಗಿದ್ದು, ಕಳೆದ ಸಾಲಿನಲ್ಲಿ 6 ಸ್ಥಾನದಲ್ಲಿದೆ. ಹೀಗಾಗಿ, ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ರಸ್ತೆ ಸುರಕ್ಷತಾ ಮಾಸಾಚರಣೆ ಹಮ್ಮಿಕೊಳ್ಳುತ್ತಿದ್ದೇವೆ. ಈ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ವಾಹನ ಸವಾರರಿಗೆ ಮನವರಿಕೆ ಮಾಡಿಕೊಡುತ್ತೇವೆ.- ವಸಂತ್ ಈಶ್ವರ್ ಚೌಹಾಣ್, ಉಪ ಸಾರಿಗೆ ಆಯುಕ್ತ