ಮಂಗಳವಾರ ಮುಂಜಾನೆ 10 ಗಂಟೆ ಸುಮಾರಿಗೆ ಘಟನೆ ನಡದಿದ್ದು, ಖಾಸಗಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ಹೊಂಡಕ್ಕೆ ಇಳಿದ ಪರಿಣಾಮ ಮುಗುಚಿ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಮಾಲೂರುಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲಾ ಬಸ್‌ವೊಂದು ಹೊಂಡಕ್ಕೆ ಉರುಳಿದ ಪರಿಣಾಮ 5ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿರುವ ಘಟನೆ ಮಾಲೂರಿನಲ್ಲಿ ನಡೆದಿದೆ. ತಾಲೂಕಿನ ಅರಣಘಟ್ಟ ಬಳಿ ಮಂಗಳವಾರ ಮುಂಜಾನೆ 10 ಗಂಟೆ ಸುಮಾರಿಗೆ ಘಟನೆ ನಡದಿದ್ದು, ಖಾಸಗಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ಹೊಂಡಕ್ಕೆ ಇಳಿದ ಪರಿಣಾಮ ಮುಗುಚಿ ಬಿದ್ದಿದೆ. ಗ್ರಾಮೀಣ ಭಾಗದಿಂದ ಶಾಲೆಗೆ ತೆರಳುತ್ತಿದ್ದ 25 ಪುಟ್ಟ ಮಕ್ಕಳಿದ್ದ ಬಸ್‌ನಲ್ಲಿ 14 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ರೆ 5ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.ಕುಡಿಯನೂರು ಗ್ರಾಮದ ಬಳಿ ಇರುವ ಭೋಸ್ ಖಾಸಗಿ ಶಾಲೆಗೆ ಸೇರಿದ ಶಾಲಾ ಬಸ್ ಇದಾಗಿದ್ದು, ಶಾಲಾ ವಾಹನದಲ್ಲಿದ್ದ ಸುಮಾರು ಇಪ್ಪತ್ತೈದು ಮಕ್ಕಳ ಪೈಕಿ ಐದು ಮಕ್ಕಳು ತೀರ್ವ ಗಾಯಗೊಂಡಿದ್ದಾರೆ, ಗಾಯಗೊಂಡವರನ್ನ ಮೊದಲಿಗೆ ಮಾಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಮಕ್ಕಳಿಗೆ ಮಾಲೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ವಿಚಾರ ತಿಳಿದ ಪೋಷಕರು, ಮಾಲೂರು ತಹಸೀಲ್ದಾರ್ ರೂಪ ಹಾಗೂ ಕೋಲಾರ ಎಸ್ಪಿ ಕನ್ನಿಕಾ ಸುಕ್ರಿವಾಲ್ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಧೈರ್ಯ ತುಂಬಿದರು.ಸದ್ಯ 14 ಮಕ್ಕಳಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದಂತೆ ಎಲ್ಲಾ ಮಕ್ಕಳನ್ನ ಮನೆಗೆ ಕಳುಹಿಸಿಕೊಡಲಾಗಿದೆ, ಘಟನೆಗೆ ಕಾರಣಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮುಂದೆ ಮತ್ತೊಂದು ಬಸ್ ಸಂಚರಿಸುತ್ತಿತ್ತು ಓವರ್ ಟೇಕ್ ಮಾಡಲು ಹೋಗಿ ಬಸ್ ಮುಗುಚಿ ಬಿತ್ತು ಎಂದು ಎಸ್ಪಿ ಕನ್ನಿಕಾ ಸುಕ್ರಿವಾಲ್ ವಿವರ ನೀಡಿದರು.