ಮೈಷುಗರ್ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ

| Published : Jul 01 2024, 01:49 AM IST

ಸಾರಾಂಶ

ಮೈಷುಗರ್ ಕಾರ್ಖಾನೆ ಬಾಯ್ಲರ್ ಪೂಜೆಗೆ ಬರುವಂತೆ ಶಿಷ್ಟಾಚಾರದ ಪ್ರಕಾರ ಸಂಸದರಿಗೂ ಆಹ್ವಾನ ನೀಡಿದ್ದೇವೆ. ಆದರೂ ಅವರು ಬಂದಿಲ್ಲ. ಅದಕ್ಕೆ ನಾವೇನೂ ಮಾಡಲಾಗುತ್ತದೆ. ನಾವು ಯಾರನ್ನೂ ದೂರವಿಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಎಚ್.ಡಿ.ಕುಮಾರಸ್ವಾಮಿ ಹೆಸರೇಳದೇ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಸಕ್ಕರೆ ಕಾರ್ಖಾನೆ ೨೦೨೩-೨೪ನೇ ಸಾಲಿನಲ್ಲಿ ಕಬ್ಬು ನುರಿಸುವ ಕಾರ್ಯಾಚರಣೆ ಆರಂಭಿಸುವುದಕ್ಕೆ ಪೂರ್ವಭಾವಿಯಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕಾರ್ಖಾನೆಯ ಬಾಯ್ಲರ್‌ಗೆ ಭಾನುವಾರ ಅಗ್ನಿಸ್ಪರ್ಶ ಮಾಡಿದರು.

ಬಾಯ್ಲರ್ ಪೂಜೆ ಅಂಗವಾಗಿ ಏರ್ಪಡಿಸಿದ್ದ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಕಾರ್ಖಾನೆಯ ಅಧಿಕಾರಿಗಳಿಂದ ಕಂಪನಿಯ ಸ್ಥಿತಿ-ಗತಿಗಳ ಕುರಿತಂತೆ ಮಾಹಿತಿ ಪಡೆದುಕೊಂಡರು. ರೈತ ಮುಖಂಡರ ಜೊತೆಯೂ ಮಾತುಕತೆ ನಡೆಸಿ ಬೇಡಿಕೆಗಳ ಕುರಿತಂತೆ ಚರ್ಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನಾ ಕಾರಣಗಳಿಂದ ಕಾರ್ಖಾನೆ ಹಲವು ವರ್ಷಗಳಿಂದ ಕಬ್ಬು ಅರೆಯುವಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ೫೦ ಕೋಟಿ ರು. ಬಿಡುಗಡೆಗೊಳಿಸಿ ಕಾರ್ಖಾನೆಯನ್ನು ಪುನಾರಂಭಿಸಿತು. ಒಟ್ಟು ೨,೪೧,೩೦೫ ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿತ್ತು. ಕಬ್ಬು ಸರಬರಾಜು ಮಾಡಿದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಹಣವನ್ನೂ ಪಾವತಿಸಿರುವುದಾಗಿ ತಿಳಿಸಿದರು.

ಈ ಸಾಲಿನಲ್ಲಿ ೨.೫೦ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಲಾಗಿದೆ. ಇದುವರೆಗೆ ೧,೯೦,೦೦೦ ಮೆಟ್ರಿಕ್ ಟನ್ ಕಬ್ಬು ಒಪ್ಪಿಗೆಯಾಗಿದೆ. ಉಳಿದಂತೆ ಹೆಚ್ಚುವರಿಯಾಗಿ ಸಿಗುವ ಕಬ್ಬನ್ನು ತಂದು ನುರಿಸಲು ಪ್ರಯತ್ನಿಸಲಾಗುವುದು ಎಂದ ಸಚಿವರು, ಲಾಭ-ನಷ್ಟ ನೋಡಿ ಕಾರ್ಖಾನೆಯನ್ನು ಆರಂಭಿಸಿರಲಿಲ್ಲ. ಈಗಲೇ ಅದೆಲ್ಲವನ್ನೂ ಪರಿಗಣಿಸಲಾಗುವುದಿಲ್ಲ. ಮೈಸೂರು ಅರಸರ ಕಾಲದ ಕಾರ್ಖಾನೆಯನ್ನು ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಪ್ರಮುಖ ಉದ್ದೇಶ. ಕಾರ್ಖಾನೆಯಲ್ಲಿ ಸಹ ವಿದ್ಯುತ್ ಘಟಕವೂ ಇರುವುದರಿಂದ ಮುಂದೆ ಲಾಭದತ್ತ ಮುನ್ನಡೆಯಲಿದೆ. ಈಗಲೇ ಲಾಭ-ನಷ್ಟವನ್ನು ಕಾರ್ಖಾನೆಗೆ ಮಾನದಂಡ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಖಾನೆಯ ವಿದ್ಯುತ್ ಬಿಲ್ ೫೨.೨೫ ಕೋಟಿ ರು. ಬಾಕಿ ಇದ್ದು, ಅದನ್ನು ಮನ್ನಾ ಮಾಡುವಂತೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಸರ್ಕಾರಕ್ಕೆ ಮನವಿ ಮಾಡಿದ್ದು, ನಾನೂ ಈ ವಿಷಯವಾಗಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.

ಸಂಸದರನ್ನು ಆಹ್ವಾನಿಸಿದ್ದೇವೆ:

ಮೈಷುಗರ್ ಕಾರ್ಖಾನೆ ಬಾಯ್ಲರ್ ಪೂಜೆಗೆ ಬರುವಂತೆ ಶಿಷ್ಟಾಚಾರದ ಪ್ರಕಾರ ಸಂಸದರಿಗೂ ಆಹ್ವಾನ ನೀಡಿದ್ದೇವೆ. ಆದರೂ ಅವರು ಬಂದಿಲ್ಲ. ಅದಕ್ಕೆ ನಾವೇನೂ ಮಾಡಲಾಗುತ್ತದೆ. ನಾವು ಯಾರನ್ನೂ ದೂರವಿಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಎಚ್.ಡಿ.ಕುಮಾರಸ್ವಾಮಿ ಹೆಸರೇಳದೇ ಮಾತನಾಡಿದರು.

ಬಾಯ್ಲರ್ ಪೂಜೆ ವೇಳೆ ಶಾಸಕರಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ರೈತಮುಖಂಡರಾದ ಕೆ.ಬೋರಯ್ಯ, ಸುನಂದಾ ಜಯರಾಂ, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಕನ್ನಡಸೇನೆ ಮಂಜುನಾಥ್ ಇತರರಿದ್ದರು.