ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಅಂಗೀಕರಿಸದೇ ಪರಿಷ್ಕರಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಯಿಂದ ಅ.13ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಪೂರಿಗಾಲಿ ಜಯರಾಜು ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆ ಮೂಲಕ ಪಟ್ಟಣದ ಅನಂತ್‌ರಾಂ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಒಳ ಮೀಸಲಾತಿ ನೀಡುವ ಸಂಬಂಧ ಸರ್ಕಾರ ನೇಮಿಸಿದ್ದ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಬಲಗೈ ಸಮುದಾಯಕ್ಕೆ ಸೇರಿದ ಉಪ ಜಾತಿಗಳನ್ನು ವರ್ಗಾಯಿಸುವ ಮೂಲಕ ಜನಸಂಖ್ಯೆ ಕಡಿಮೆಗೊಳ್ಳುವಂತೆ ಮಾಡಲಾಗಿದೆ. ಇದರಿಂದ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯವಾಗುವುದರಿಂದ ಬಲಗೈ ಸಮುದಾಯದ ಉಪಜಾತಿಗಳ ಜನಸಂಖ್ಯೆಯನ್ನು ಒಗ್ಗೂಡಿಸಿ ವರದಿ ಅಂಗಿಕರಿಸಬೇಕೆಂದು ಒತ್ತಾಯಿಸಿದರು.ಮುಖಂಡ ಕಾಂತರಾಜು ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಲಿತ ಸಮುದಾಯದ ಒಗ್ಗಟ್ಟನ್ನು ಹೊಡೆಯುವ ತಂತ್ರಗಾರಿಕೆಯಿಂದ ಒಳ ಮೀಸಲಾತಿಯಲ್ಲಿ ಉಪ ಜಾತಿ ಸೇರಿಸಿದ್ದಾರೆ. ಬಲಗೈ ಸಮುದಾಯದ ಶಾಸಕರು, ಸಚಿವರು ಹಾಗೂ ಸಂಸದರು ಸರ್ಕಾರಗಳಿಗೆ ಜನಸಂಖ್ಯೆ ಬಗ್ಗೆ ಮನವರಿಕೆ ಮಾಡುವ ಮೂಲಕ ಬಲಗೈ ಸಮುದಾಯಕ್ಕೆ ಸೇರಿದ ಎಲ್ಲಾ ಉಪಜಾತಿಗಳನ್ನು ಒಟ್ಟಿಗೆ ಸೇರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಬಿಎಸ್‌ಪಿ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಬಲಗೈ ಸಮುದಾಯದ ಜನರು ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನಿರ್ಲಕ್ಷ್ಯ ವಹಿಸಿದರೇ ಮೀಸಲಾತಿಯ ಅನ್ಯಾಯ ಎದುರಿಸಬೇಕಾಗುವುದರಿಂದ ಅ.13ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕೆಂದು ಕೋರಿದರು.ಬಿಜೆಪಿ ಮುಖಂಡ ಕುಮಾರಸ್ವಾಮಿ ಮಾತನಾಡಿ, ನಮ್ಮಲ್ಲಿನ ಗೊಂದಲವೇ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆಗೊಳ್ಳಲು ಕಾರಣವಾಗಿದೆ. ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳಲು ಬಲಗೈ ಸಮುದಾಯದ ಎಲ್ಲಾರು ಪಕ್ಷಾತೀತವಾಗಿ ಒಂದಾಗಬೇಕಿದೆ ಎಂದರು.
ಇದೇ ವೇಳೆ ಪುರಸಭೆ ಸದಸ್ಯ ಸಿದ್ದರಾಜು, ಯತೀಶ್, ಕಿರಣ್‌ಶಂಕರ್, ಚಿಕ್ಕಣ್ಣ, ಶಾಂತರಾಜು, ಶಿವಕುಮಾರ್, ಮಹೇಶ್, ರವೀಂದ್ರ, ಸುರೇಶ್, ನಟರಾಜು, ಪ್ರಕಾಶ್, ಚಿಕ್ಕಸ್ವಾಮಿ, ಮಹದೇವಯ್ಯ, ಪ್ರಸಾದ್, ಜಗದೀಶ್, ಸಿದ್ದರಾಜು ಸೇರಿದಂತೆ ಇತರರು ಇದ್ದರು.