ಸಾರಾಂಶ
ಕಲಬುರಗಿ-ಬೀದರ್ ಹಾಗೂ ಯಾದಗಿರಿ ಜಿಲ್ಲೆ ಸೇರಿದಂತಿರುವ ಕಲಬುರಗಿ ಹಾಲು ಒಕ್ಕೂಟದಿಂದ ಹೊಸದಾಗಿ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಎಮ್ಮೆ ಹಾಲು ಉತ್ಪನ್ನದ ಹಾಲಿನ ಪ್ಯಾಕೆಟ್‌ಗಳನ್ನು ಗ್ರಾಹಕರಿಗಾಗಿ ಹೊರತರಲಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ-ಬೀದರ್ ಹಾಗೂ ಯಾದಗಿರಿ ಜಿಲ್ಲೆ ಸೇರಿದಂತಿರುವ ಕಲಬುರಗಿ ಹಾಲು ಒಕ್ಕೂಟದಿಂದ ಹೊಸದಾಗಿ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಎಮ್ಮೆ ಹಾಲು ಉತ್ಪನ್ನದ ಹಾಲಿನ ಪ್ಯಾಕೆಟ್‌ಗಳನ್ನು ಗ್ರಾಹಕರಿಗಾಗಿ ಹೊರತರಲಾಗಿದೆ.ನಂದಿನಿ ಎಮ್ಮೆ ಹಾಲನ್ನು ಸಚಿವ ಪ್ರಿಯಾಂಕ್ ಖರ್ಗೆ, ದಿನೇಶ ಗುಂಡೂರಾವ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಆದಿಯಾಗಿ ಗಣ್ಯರು ಇಂದು ಕಲಬುರಗಿಯಲ್ಲಿ ಗ್ರಾಹಕರಿಗಾಗಿ ಬಿಡುಗಡೆ ಮಾಡಿದರು. ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟದಿಂದ 198 ಪಾರ್ಲರ್ ನಡೆಸಲಾಗುತ್ತಿದೆ. 700 ಜನ ನಂದಿನಿ ಏಜೆಂಟ್ ಇದ್ದಾರೆ. ಕಳೆದ 2022-23ನೇ ಸಾಲಿನಲ್ಲಿ ಒಕ್ಕೂಟಕ್ಕೆ ದೊರೆತ ₹7 ಕೋಟಿ ಲಾಭ ಪುನಃ ರೈತರಿಗೆ ಪ್ರೋತ್ಸಾಹ ಧನ ರೂಪದಲ್ಲಿ ನೀಡಲಾಗಿದೆ. ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಲಾಭ ಗಳಿಕೆಯಲ್ಲಿ 2ನೇ ಸ್ಥಾನದಲ್ಲಿದೆ ಎಂದರು.ಕಲಬುರಗಿ ಡೈರಿ ವ್ಯಾಪ್ತಿಯಲ್ಲಿ ನಿತ್ಯ ಉತ್ಪಾದನೆಯಾಗುವ 83 ಸಾವಿರ ಲೀಟರ್ ಹಾಲಿನಲ್ಲಿ 33 ಸಾವಿರ ಲೀಟರ್ ಎಮ್ಮೆ ಹಾಲೇ ಆಗಿರುತ್ತೆ. ಅದಕ್ಕೇ ನಾವು ಎಮ್ಮೆ ಹಾಲಿನ್ನು ಪ್ರತ್ಯೇಕ ಪ್ಯಾಕೆಟ್ ಮಾಡಿ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ಕಲಬುರಗಿ ಡೈರಿ ರೈತರಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ 45 ರು, ಹಸುವಿನ ಹಾಲಿಗೆ 33 ರುಪಾಯಿ ನೀಡುತ್ತಿದೆ ಎಂದರು.ಜಿಲ್ಲೆಯಲ್ಲಿ ಆರ್.ಕೆ.ಪಾಟೀಲ ನೇತೃತ್ವದಲ್ಲಿ ಕಲಬುರಗಿ ಹಾಲು ಒಕ್ಕೂಟ ಶ್ವೇತ ಕ್ರಾಂತಿ ಮಾಡುತ್ತಿದೆ. ಹೊಸದಾಗಿ ಡೈರಿ ಸ್ಥಾಪಿಸಲು ಸರ್ಕಾರದಿಂದ ಸಹಕಾರ ನೀಡಲಾಗುವುದು. ಕಲಬುರಗಿ ಒಕ್ಕೂಟದಿಂದ ಪ್ರತಿ ತಿಂಗಳು 40 ಟನ್ ತುಪ್ಪ ಹೊರಬರುತ್ತಿದ್ದರೆ, ತುಮಕೂರು ತಾಲೂಕಿನ ಶಿರಾ ತಾಲೂಕು ಒಂದರಲ್ಲಿಯೆ ಇಷ್ಟು ಹೊರತರಲಾಗುತ್ತಿದೆ. ಹೀಗಾಗಿ ಇಲ್ಲಿ ಹೈನುಗಾರಿಕೆ ಕ್ಷೇತ್ರ ಇನ್ನೂ ಹೆಚ್ಚು ಬೆಳೆಯಬೇಕಿದೆ. ಇದಕ್ಕಾಗಿ ಒಕ್ಕೂಟ ಇನ್ನು ಹೆಚ್ಚಿನ ಶ್ರಮ ವಹಿಸಬೇಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.ಒಕ್ಕೂಟದ ಎಂ.ಡಿ ಪಿ.ವಿ.ಪಾಟೀಲ, ಮಾರ್ಕೆಟಿಂಗ್ ಮ್ಯಾನೇಜರ್ ಚಂದ್ರಶೇಖರ ಪತ್ತಾರ ಇದ್ದರು.