ಹರಪನಹಳ್ಳಿ ತಾಲೂಕಲ್ಲಿ ಮಹಿಳೆಯರ ದರ್ಬಾರ್‌!

| Published : Mar 08 2024, 01:51 AM IST

ಸಾರಾಂಶ

ಕ್ಷೇತ್ರದ ಶಾಸಕರು, ಪೊಲೀಸ್‌ ಇಲಾಖೆ, ಕೋರ್ಟ್‌ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಮಹಿಳೆ ಅಬಲೆಯಲ್ಲ, ಸಬಲೆ ಎಂದು ನಿರೂಪಿಸಿದ್ದಾರೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಹಿಂದೊಂದು ಕಾಲವಿತ್ತು. ಮಹಿಳೆ ಅಡುಗೆ ಮನೆಗೆ ಸೀಮಿತ. ಗಂಡ, ಮಕ್ಕಳ ಬೇಕು- ಬೇಡಗಳನ್ನು ನೋಡಿಕೊಳ್ಳುವುದಷ್ಟೆ ಆಕೆಯ ಕೆಲಸ ಎಂದು. ಆದರೆ ಇಂದು ಕಾಲ ಬದಲಾಗಿದೆ. ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಇದಕ್ಕೆ ಹರಪನಹಳ್ಳಿ ತಾಲೂಕಿನಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರೇ ಸಾಕ್ಷಿ. ಕ್ಷೇತ್ರದ ಶಾಸಕರು, ಪೊಲೀಸ್‌ ಇಲಾಖೆ, ಕೋರ್ಟ್‌ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಮಹಿಳೆ ಅಬಲೆಯಲ್ಲ, ಸಬಲೆ ಎಂದು ನಿರೂಪಿಸಿದ್ದಾರೆ. ಅಲ್ಲದೇ ತಾಲೂಕಿನ ನಾನಾ ಇಲಾಖೆಯಲ್ಲಿ ಮಹಿಳೆಯರ ದರ್ಬಾರ್‌ ಶುರು ಆಗಿದೆ ಎಂದರೆ ಖಂಡಿತಾ ತಪ್ಪಾಗಲಾರದು. ಶಾಸಕಿ ಎಂ.ಪಿ. ಲತಾ: ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಇಲ್ಲಿಯ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಪಕ್ಷೇತರರಾಗಿ ಗೆದ್ದು ಶಾಸಕಿಯಾಗಿ ಆಡಳಿತ ನಡೆಸುತ್ತಿದ್ದಾರೆ. ನಾಡಿನ ಸಜ್ಜನ, ಸಾಂಸ್ಕೃತಿಕ ರಾಯಭಾರಿ ದಿ. ಎಂ.ಪಿ. ಪ್ರಕಾಶ ಅವರ ಪುತ್ರಿ ಎಂ.ಪಿ. ಲತಾ ಈ ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿ. ಎರಡು ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಾ ಅಭಿವೃದ್ಧಿಯ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.

ರೇಣುಕಾದೇವಿ:

ಇಲ್ಲಿಯ ಸಮಾಜಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿಯಾಗಿ ರೇಣುಕಾದೇವಿ ಅವರು ಸೇವೆ ಸಲ್ಲಿಸುತ್ತಿದ್ದು, ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳ ಆಗುಹೋಗುಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ವಿಜಯಲಕ್ಷ್ಮಿ ಹತ್ತಿಕಾಳು:

ವಿಜಯಲಕ್ಷ್ಮಿ ಹತ್ತಿಕಾಳು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ(ಬಿಸಿಎಂ)ಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಬಿಸಿಎಂ ಹಾಸ್ಟೆಲ್‌ಗಳ ಸ್ಥಿತಿಗತಿ ಸುಧಾರಣೆಗೆ ಮುಂದಾಗಿದ್ದಾರೆ.

ಪಿಎಸ್ಐ ನಾಗರತ್ನ: 62 ಹಳ್ಳಿಗಳನ್ನೊಳಗೊಂಡ ತಾಲೂಕಿನ ಹಲುವಾಗಲು ಪೊಲೀಸ್‌ ಠಾಣೆಯ ಸಬ್ ಇನ್ಸೆಪೆಕ್ಟರ್ ಆಗಿ ನಾಗರತ್ನ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ತಾಲೂಕಿನ ಚಿಗಟೇರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಆಗಿ ನಾಗವೇಣಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನ್ಯಾಯ ನೀಡುವವರು ಮಹಿಳೆಯರೇ: ಇಲ್ಲಿಯ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಫಕ್ಕೀರವ್ವ ಕೆಳಮನೆ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಎಂ. ಭಾರತಿ ಅವರು ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೀನಾಕ್ಷಿ ಮತ್ತು ನಿರ್ಮಲಾ: ಇಲ್ಲಿಯ ನ್ಯಾಯಾಲಯದಲ್ಲಿ ಕಿರಿಯ ಶ್ರೇಣಿ ಕೋರ್ಟ್‌ನಲ್ಲಿ ಮೀನಾಕ್ಷಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ನಿರ್ಮಲಾ ಅವರು ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರತಜ್ಞೆಯಾಗಿ ಮಂಗಳಾ, ಚರ್ಮರೋಗ ತಜ್ಞೆಯಾಗಿ ವಂದನಾ, ಹೆರಿಗೆ ತಜ್ಞರಾಗಿ ರೇಣುಕಾ ಅವರು ಕರ್ತವ್ಯದಲ್ಲಿದ್ದಾರೆ.

ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ವರು ಮಹಿಳಾ ವೈದ್ಯರು ಸೇವೆಯಲ್ಲಿದ್ದಾರೆ. ಇವರಲ್ಲದೆ ತಾಲೂಕಿನ 37 ಗ್ರಾಮ ಪಂಚಾಯಿತಿಗಳಲ್ಲಿ 24 ಗ್ರಾಪಂಗಳಲ್ಲಿ ಅಧ್ಯಕ್ಷರಾಗಿ ಹಾಗೂ 26 ಗ್ರಾಪಂಗಳಲ್ಲಿ ಉಪಾಧ್ಯಕ್ಷರಾಗಿ ಮಹಿಳೆಯರೇ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಈ ಪೈಕಿ 12 ಗ್ರಾಪಂಗಳಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮಹಿಳೆಯರೇ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಮತ್ತೊಂದು ವಿಶೇಷವಾಗಿದೆ.

ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 480 ಮಹಿಳೆಯರು ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ಇನ್ನು ಇಲ್ಲಿಯ ಟಿಎಪಿಸಿಎಂಎಸ್‌ ಅಧ್ಯಕ್ಷರಾಗಿ ಎಚ್. ನೇತ್ರಾವತಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗೆ ರಾಜಕೀಯ, ರಕ್ಷಣೆ, ಸಾಮಾಜಿಕ ಸೇರಿದಂತೆ ಹಲವು ಕ್ಷೇತ್ರದಲ್ಲೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇದು ಬದಲಾವಣೆಗೆ ಗಾಳಿ ಬೀಸುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ.

ಖುಷಿ ಇದೆ: ಪ್ರಥಮ ಮಹಿಳಾ ಶಾಸಕರಾಗಿದ್ದಕ್ಕೆ ಖುಷಿ ಇದೆ. ಜನಸೇವೆಗೆ ಅವಕಾಶವನ್ನು ಇಲ್ಲಿಯ ಮತದಾರರು ನನಗೆ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಮಹಿಳೆಯರಿಗೆ ಪ್ರೋತ್ಸಾಹ ಸಿಕ್ಕರೆ ಏನನ್ನಾದರೂ ಸಾಧಿಸಬಲ್ಲರು ಎಂದು ಶಾಸಕಿ ಎಂ.ಪಿ. ಲತಾ ತಿಳಿಸಿದರು.