ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ

| Published : Nov 08 2025, 02:00 AM IST

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿರುವುದು ಬಯಲು ಸೀಮೆಯ ಜನರಿಗೆ ನಿರಾಶೆ

ಬಿಜಿಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಅತ್ತ ಕೂಡ್ಲಿಗಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡರೆ ಇತ್ತ ಬಯಲು ಸೀಮೆಯ ಜನರ ಜೀವನಾಡಿಯಾಗಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭಗೊಂಡು ಒಂದುವರೆ ದಶಕ ಕಳೆಯುತ್ತ ಬಂದರೂ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿರುವುದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯನ್ನು ಸಾಕ್ಷಿಕರಿಸಿದೆ.

ಒಂದೆಡೆ ನೆರೆಯ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ತುಂಗಭದ್ರಾ ಯೋಜನೆಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಆರಂಭಗೊಂಡ ಕೆಲವೇ ವರ್ಷಗಳಲ್ಲಿ ಮುಕ್ತಾಯಗೊಂಡು ಉದ್ಘಾಟನೆಗೆ ಸಜ್ಜಾಗಿದ್ದರೆ ಇನ್ನೊಂದೆಡೆ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕೆರೆಗಳಿಗೆ ನೀರು ತುಂಬಿಸುವ ಮೊಳಕಾಲ್ಮುರು ವಲಯದ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದು ಬಯಲು ಸೀಮೆಯ ಜನರಿಗೆ ತೀವ್ರ ನಿರಾಸೆ ಮೂಡಿಸಿದೆ.

ಸತತ ಬರಗಾಲ ಇಲ್ಲಿನ ಜನರಿಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ, ಬಡತನ, ಗುಳೆ ಹೋಗುವುದು ಇಲ್ಲಿನವರಿಗೆ ಸಾಮಾನ್ಯ, ಕುಡಿಯುವ ನೀರಿಗೂ ಬರ, ಬಿರು ಬಿಸಿಲಿಗೆ ಅಂತರ್ಜಲ ಕುಸಿತ ಕಂಡು ಬಹುತೇಕರಿಗೆ ಪ್ಲೋರೈಡ್ ನೀರೆ ಅನಿವಾರ್ಯ. ಹತ್ತು ಹಲವು ಸಮಸ್ಯೆಗಳನ್ನು ಹರವಿಕೊಂಡು ಕುಳಿತಿರುವ ಜನರಿಗೆ ಕ್ಷೇತ್ರದ ಕೆರೆಗಳಿಗೆ ನೀರುಣಿಸುವ ಯೋಜನೆ ಭರವಸೆಯಿಂದಾಗಿ ಇಲ್ಲಿನ ಅನ್ನದಾತರ ಬದುಕಲ್ಲಿ ಹೊಸ ಚಿಗುರು ಹುಟ್ಟುವಂತೆ ಮಾಡಿತ್ತು.

ಆದರೀಗ ದಶಕ ಕಳೆದರೂ ಕೂಡ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿರುವುದು ಜನತೆಯಲ್ಲಿ ನೀರಾವರಿಯ ಕನಸನ್ನು ಭಗ್ನಗೊಳಿಸಿದೆ. ಗುರುತ್ವಾಕರ್ಷಣೆ ತಂತ್ರಜ್ಞಾನದ ಮೂಲಕ 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು 2015ರಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆಡಳಿತದಲ್ಲಿ ಈ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯನವರು ಆಡಳಿತಾತ್ಮಕವಾಗಿ ಮಂಜೂರಾತಿ ನೀಡಿದ್ದರು. 545 ಕೋಟಿ ರು. ವೆಚ್ಚ ಅಂದಾಜಿನ ಯೋಜನೆಗೆ 562 ಕೋಟಿ ವೆಚ್ಚ ಗುತ್ತಿಗೆ ಮೊತ್ತ ನಿಗದಿಯಾಗಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು. 2020-21ರಲ್ಲಿ ಕಾಮಗಾರಿ ಆರಂಭಗೊಂಡು ಇಲ್ಲಿಯ ವರೆಗೆ ಕೇವಲ 35% ಕೆಲಸ ಮಾತ್ರ ನಡೆದಿದ್ದು ಪ್ರಸ್ತುತ ಕಾಮಗಾರಿ ಮುಂದುವರಿಕೆಗೆ ಅನುದಾನ ಕೊರತೆ ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಕಾಮಗಾರಿ ತ್ವರಿತಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ. 336 ಕಿ.ಮೀ ಉದ್ದದ ಪೈಪ್‌ಲೈನ್‌ ಕಾಮಗಾರಿಯಲ್ಲಿ ಕೇವಲ 96 ಕಿಮೀ ಪೈಪ್‌ಲೈನು ಮುಗಿದಿದೆ. ಈಗಾಗಲೇ ಕೆರೆಗಳಲ್ಲಿ ಪೈಪುಗಳನ್ನು ಅಳವಡಿಕೆಯಾಗಿದ್ದರೂ ಸಂಪರ್ಕ ಪೈಪ್‌ಲೈನ್‌ ಕಾಮಗಾರಿ ವಿಳಂಬವಾಗಿದೆ. ಇದಕ್ಕೆ ಪೈಪು ಲೈನು ಕಾಮಗಾರಿ ಹಾದು ಹೋಗುವ ಜಮೀನು ಮಾಲೀಕರ ಪೈಕಿ ಕೆಲ ರೈತರ ತಕರಾರಿನ ಜೊತೆಗೆ ಅನುದಾನದ ಕೊರತೆ ಕಾಡುತ್ತಿದೆ ಎನ್ನಲಾಗಿದೆ.ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ತ್ವರಿತ ಗೊಳ್ಳಲು ಇಚ್ಛಾಶಕ್ತಿ ಮೆರೆಯಬೇಕು ಎನ್ನುವುದು ಬಹುತೇಕರ ಮಾತಾಗಿದೆ.

ಕ್ಷೇತ್ರದ 59 ಕೆರೆಗಳ ಪೈಕಿ ಚಳ್ಳಕೆರೆ ತಾಲೂಕಿನ ಮುಷ್ಟಲ ಗುಮ್ಮಿ, ಬೊಮ್ಮಕ್ಕನಹಳ್ಳಿ, ರಾಮದುರ್ಗ, ಮನಮಯ್ಯನಹಟ್ಟಿ, ಕುದಾಪುರ, ಗೌರಿಪುರ, ನೇರಲಗುಂಟೆ, ಬತ್ತಯ್ಯನ ಹಟ್ಟಿ, ತಿಮ್ಮನಹಳ್ಳಿ, ಬುಡ್ನಹಟ್ಟಿ, ತಳಕು ಮೊಳಕಾಲ್ಮರು ತಾಲೂಕಿನ ಮುತ್ತಿಗಾರ ಹಳ್ಳಿ, ದುಪ್ಪಿ, ಕೋನಸಾಗರ, ಬೊಮ್ಮಲಿಂಗನಹಳ್ಳಿ, ಅಕ್ಕನ ಹಳ್ಳಿ, ಹಿರೆಕೆರೆ ಹಳ್ಳಿ, ನಾಗಸಮುದ್ರ, ಸಿದ್ದಾಪುರ, ಬಟ್ರಹಳ್ಳಿ ಅಮಕುಂದಿ, ಚಿಕ್ಕನಹಳ್ಳಿ, ಗೌರಸಮುದ್ರ, ದೇವಸಮುದ್ರ, ರಂಗಯ್ಯನದುರ್ಗ, ತುಮಕೂರ್ಲಹಳ್ಳಿ 3, ಎರಪೂತ ಜೋಗಿಹಳ್ಳಿ, ಯರೆನಹಳ್ಳಿ 2, ಕಾಟನಾಯಕನಹಳ್ಳಿ ಕೆರೆಗಳಿಗೆ ಮೊಳಕಾಲ್ಮರು ಗ್ರ್ಯಾವಿಟಿ ಲೆವೆಲ್ ನಲ್ಲಿ ನೀರು ಹರಿದು ಬಂದರೆ, ಚಳ್ಳಕೆರೆ ತಾಲೂಕಿನ ಉಳ್ಳಾರ್ತಿ, ವಲಸೆ, ಯಾದಲಗಟ್ಟ, ಗುಡಿಹಳ್ಳಿ, ತಿಮ್ಮನಹಳ್ಳಿ ಕೆರೆಗಳಿಗೆ ಗ್ರ್ಯಾವಿಟಿ ಲೆವೆಲ್ ನಲ್ಲಿ ನೀರು ಹರಿಯಲಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಕೆರೆಗಳಿಗೆ ನೀರು ತುಂಬಿಸಿ

2018ರಲ್ಲಿ ಕೂಡ್ಲಿಗಿಯಲ್ಲಿ ಶಾಸಕರಾಗಿದ್ದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ದೂರದೃಷ್ಟಿಯ ಫಲವಾಗಿ ಅಂದು ಆ ಕ್ಷೇತ್ರದ 74 ಕೆರೆಗಳಿಗೆ 674 ಕೋಟಿ ರು.ವೆಚ್ಚದ ಮಹತ್ವಾಕಾಂಕ್ಷೆ ಯೋಜನೆ ತರುವಲ್ಲಿ ಯಶಸ್ವಿಯಾಗಿದ್ದರು. ಜೂನ್ 2021ರಲ್ಲಿ ಬಿಜೆಪಿ ಸರ್ಕಾರದಲ್ಲಿ ಆಡಳಿತಾತ್ಮಕವಾಗಿ ಮಂಜೂರಾತಿ ಸಿಕ್ಕು ಕೇವಲ ನಾಲ್ಕು ವರ್ಷಗಳಲ್ಲಿ ಕಾಮಗಾರಿ ಮುಗಿದು ಅಲ್ಲಿನ ರೈತಾಪಿ ವರ್ಗಕ್ಕೆ ದಾಹ ತಣಿಸಲು ಸಜ್ಜಾಗಿದೆ. ಇನ್ನೂ ಕೆಲ ದಿನಗಳಲ್ಲಿ ಕೂಡ್ಲಿಗಿ ತಾಲೂಕಿನ ಎಲ್ಲಾ ಕೆರೆಗಳ ಒಡಲಿಗೆ ತುಂಗಾ ಭದ್ರಾ ಸೇರಲು ಸಿದ್ಧಳಾಗಿದ್ದಾಳೆ. ಅದರಂತೆ ನನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ವೇಗ ಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕೆನ್ನುವುದು ತಾಲೂಕಿನ ರೈತರ ಅಭಿಪ್ರಾಯವಾಗಿದೆ.