ನಂಜನಗೂಡು ನಗರಸಭೆ 75.73 ಲಕ್ಷ ಉಳಿತಾಯ ಬಜೆಟ್ ಮಂಡನೆ

| Published : Apr 05 2025, 12:45 AM IST

ಸಾರಾಂಶ

ಕಳೆದ ಬಜೆಟ್ ನಲ್ಲಿ ಪೌರಕಾರ್ಮಿಕರ ಅಭಿವೃದ್ಧಿಗಾಗಿ ಒಂದು ಕೋಟಿ ಅನುದಾನ ಮೀಸಲಿಡಲಾಗಿತ್ತು, ಈ ಬಾರಿ ಪೌರಕಾರ್ಮಿಕರ ಅಭಿವೃದ್ದಿಗೆ ಮಾನ್ಯತೆ ನೀಡಲಾಗಿಲ್ಲ, ರೆವಿನ್ಯೂ ಬಡಾವಣೆಗಳ 8 ಸಾವಿರ ಮನೆಗಳಿಂದ ಎರಡು ಪಟ್ಟು ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ, ಆದರೂ ರೆವಿನ್ಯೂ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ.

ಕನ್ನಡಪ್ರಭ ವಾರ್ತೆ ನಂಜನಗೂಡು

ನಂಜನಗೂಡು ನಗರಸಭೆಯ 2025-26ನೇ ಸಾಲಿನ ಸುಮಾರು 64 ಕೋಟಿ ಗಾತ್ರದ, 75.73 ಲಕ್ಷ ಉಳಿತಾಯ ಬಜೆಟ್ ನ್ನು ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ ಮಂಡಿಸಿದರು.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ 2025-26ನೇ ಸಾಲಿನ ಆಯವ್ಯಯ ಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಅವರು, ನಗರಸಭೆಗೆ ಸರ್ಕಾರದ ವಿವಿಧ ಅನುದಾನಗಳು ಹಾಗೂ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ನೀರಿನ ತೆರಿಗೆ ಮುಂತಾದ ಬಾಬ್ತುಗಳಿಂದ 63.99 ಕೋಟಿ 99 ಆದಾಯ ಸಂಗ್ರಹವಾಗಲಿದೆ, ಅದರಲ್ಲಿ ಅಭಿವೃದ್ಧಿ ಕಾಮಗಾರಿ ಅನುದಾನ, ನೌಕರರ ವೇತನ ಕಳೆದು ನಗರಸಭೆಗೆ 75.73 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ, ಅಲ್ಲದೆ ಈ ಬಾರಿಯ ಬಜೆಟ್ ನಲ್ಲಿ ವಿಶೇಷವಾಗಿ ನಗರಸಭೆಯ ವತಿಯಿಂದ ತರಕಾರಿ ಮತ್ತು ನಾನ್ ವೆಜ್ ಆಹಾರವನ್ನು ಒಳಗೊಂಡಂತೆ ಇನ್ನು ಎರಡು ಕಡೆ ಫುಡ್ ಜೋನ್ ಗಳನ್ನು ನಿರ್ಮಿಸಲು 50 ಲಕ್ಷ ಮೀಸಲಿಡಲಾಗಿದೆ, ನಂಜನಗೂಡು ನಗರಸಭಾ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ ಸಮಗ್ರ ಮಾಹಿತಿ ವಿವರಗಳನ್ನು ಒಳಗೊಂಡ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು 10 ಲಕ್ಷ ಮೀಸಲಿಡಲಾಗಿದೆ ಎಂದರು.

ವಿಶೇಷವಾಗಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು 10 ಲಕ್ಷ ಮತ್ತು ಪೈಲೆಟ್ ಮಾದರಿಯಲ್ಲಿ ಒಂದು ಥೀಮ್ ಪಾರ್ಕ್ ನಿರ್ಮಾಣ ಮಾಡಲು 25 ಲಕ್ಷಗಳನ್ನು ಮೀಸಲಿಡಲಾಗಿದೆ, ಜೊತೆಗೆ ಪೌರಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣಕ್ಕಾಗಿ 20 ಲಕ್ಷ, ಇವುಗಳಲ್ಲದೆ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಮಾಡುವ ಸಲುವಾಗಿ ಈ ಬಾರಿಯ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ವೃತ್ತಗಳ ಅಭಿವೃದ್ಧಿ, ತಡೆಗೋಡೆ ನಿರ್ಮಾಣ:

ನಗರಸಭಾ ವ್ಯಾಪ್ತಿಯ ವೃತ್ತಗಳ ಅಭಿವೃದ್ಧಿ, ತಡೆಗೋಡೆ ನಿರ್ಮಾಣ, ಸ್ವಾಗತ ಕಮಾನುಗಳಿಗಾಗಿ 1 ಕೋಟಿ, ರಸ್ತೆ, ಚರಂಡಿ, ಪಾದಚಾರಿಗಳ ಅಭಿವೃದ್ಧಿಗಾಗಿ 600 ಲಕ್ಷ, ಘನತಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ನಿವೇಶನ ಖರೀದಿ 1 ಕೋಟಿ, ನೈರ್ಮಲ್ಯ ಯಂತ್ರೋಪಕರಣಗಳ ಖರೀದಿಗಾಗಿ 65 ಲಕ್ಷ, ವಾಣಿಜ್ಯ ಮಳಿಗೆ, ಅಂಗನವಾಡಿ ಕಟ್ಟಡ, ಸಮುದಾಯ ಭವನ ನಿರ್ಮಾಣಕ್ಕಾಗಿ ಒಂದು ಕೋಟಿ, ಸೇತುವೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ಒಂದು ಕೋಟಿ, ಬೀದಿ ದೀಪ, ವಿದ್ಯುತ್ ಚಿತಾಗಾರ ನಿರ್ಮಾಣ ಒಂದು ಕೋಟಿ ಮೀಸಲಿಡಲಾಗುತ್ತಿದೆ ಎಂದರು.

ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ:

ಸದಸ್ಯ ಎಚ್.ಎಸ್. ಮಹದೇವಸ್ವಾಮಿ ಮಾತನಾಡಿ, ಕಳೆದ ಬಜೆಟ್ ನಲ್ಲಿ ಪೌರಕಾರ್ಮಿಕರ ಅಭಿವೃದ್ಧಿಗಾಗಿ ಒಂದು ಕೋಟಿ ಅನುದಾನ ಮೀಸಲಿಡಲಾಗಿತ್ತು, ಈ ಬಾರಿ ಪೌರಕಾರ್ಮಿಕರ ಅಭಿವೃದ್ದಿಗೆ ಮಾನ್ಯತೆ ನೀಡಲಾಗಿಲ್ಲ, ರೆವಿನ್ಯೂ ಬಡಾವಣೆಗಳ 8 ಸಾವಿರ ಮನೆಗಳಿಂದ ಎರಡು ಪಟ್ಟು ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ, ಆದರೂ ರೆವಿನ್ಯೂ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ ಎಂದು ದೂರಿದರು.

ದುಪ್ಪಟ್ಟು ತೆರಿಗೆ ವಸೂಲಿ ಮಾಡುತ್ತಿಲ್ಲ ಆಯುಕ್ತರ ಸ್ಪಷ್ಟನೆ:

ಆಯುಕ್ತ ವಿಜಯ್ ಮಾತನಾಡಿ, ಕಳೆದ ನವೆಂಬರ್ ತಿಂಗಳಿನಲ್ಲಿ ಸರ್ಕಾರ ರೆವಿನ್ಯು ಬಡಾವಣೆಗಳ ಆಸ್ತಿ ತೆರಿಗೆ ಬಗ್ಗೆ ತಿದ್ದುಪಡಿ ಮಸೂದೆ ಮಂಡಿಸಿದ್ದು, ಆ ಬಡಾವಣೆಗಳಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸದಸ್ಯ ಮಹದೇವಸ್ವಾಮಿ ಸಭಾತ್ಯಾಗ:

ಸದಸ್ಯ ಎಚ್.ಎಸ್. ಮಹದೇವಸ್ವಾಮಿ ನಮ್ಮ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕುತ್ತಿಲ್ಲ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.

ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಬಜೆಡ್ ಮಂಡನೆಗೂ ಮುಂಚೆ ಎರಡು ಬಾರಿ ಬಜೆಟ್ ಪೂರ್ವಬಾವಿ ಸಭೆ ನಡೆಸಲಾಗಿತ್ತು, ಸದಸ್ಯರು ಪೂರ್ವಬಾವಿ ಸಭೆಯಲ್ಲಿ ಭಾಗವಹಿಸದೆ, ಬಜೆಟ್ ಮಂಡನೆ ಸಭೆಯಲ್ಲಿ ತಕರಾರು ತೆಗೆಯುವುದು ಸರಿಯಲ್ಲ ಎಂದು ಹೇಳಿದರು.

ಶೀಘ್ರವಾಗಿ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ನಡೆಸಿ:

ಸದಸ್ಯ ಕಪಿಲೇಶ್ ಮಾತನಾಡಿ ನಗರಸಭೆ ಚುನಾವಣೆ ನಡೆದು ಫಲಿತಾಂಶ ಬಂದ ನಂತರ, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ನಡೆಸಲು ಸರ್ಕಾರ 18 ತಿಂಗಳುಗಳ ಕಾಲ ವಿಳಂಬ ಮಾಡಿತ್ತು, ಎರಡನೆ ಅವಧಿಗೂ ಅಧ್ಯಕ್ಷ ಸ್ಥಾನದ ಚುನಾವಣೆಗಾಗಿ ಮೀಸಲಾತಿ ನಿಗದಿಪಡಿಸಲು ವಿಳಂಬ ಧೋರಣೆ ಮುಂದುವರೆಸಿದ್ದರಿಂದ ನಮ್ಮ ಅಧಿಕಾರದ ಅವಧಿ ಮೊಟಕುಗೊಂಡಿತು, ಸರ್ಕಾರ ಇನ್ನೂ ಮುಂದಾದರೂ ನಗರಸಭೆ ಚುನಾವಣೆ ಮುಗಿದ ನಂತರ ಶೀಘ್ರವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ಸರ್ಕಾರದಿಂದ ಅನುದಾನ- ಶಾಸಕ ದರ್ಶನ್‌:

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನಗರಸಭೆಯ ಆದಾಯ ಹೆಚ್ಚಿಸುವ ಸಲುವಾಗಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಬಜೆಟ್ ನಲ್ಲಿ 50 ಲಕ್ಷ ಮೀಸಲಿಡಲಾಗಿದೆ, ಬಜಾರ್ ರಸ್ತೆಯ ತರಕಾರಿ ಮಾರ್ಕೆಟ್ ಜಾಗದಲ್ಲಿ ಬಹು ಮಹಡಿ ಕಾಂಪ್ಲೆಕ್ಸ್ ನಿರ್ಮಿಸಲು ಸರ್ಕಾರದಿಂದ ಅನುದಾನ ಪಡೆಯಲಾಗುವುದು, ನಗರದಲ್ಲಿ ರಸ್ತೆ ಬದಿ ಆಹಾರ ಮಳಿಗೆಗಳಿಂದ ವಾಹನ ಸವಾರರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ನಿವಾರಿಸಲು ನಗರಸಭೆ ವ್ಯಾಪಾರಿಗಳಿಗೆ ಫುಡ್ ಜೋನ್ ಆರಂಭಿಸಿದ್ದು, ಒಳ್ಳೆಯ ಬೆಳವಣಿಗೆ, ನಗರದ ಇನ್ನೂ ಎರಡು ಕಡೆ ಫುಡ್ ಜೋನ್ ನಿರ್ಮಿಸಲಾಗುವುದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಾರಿ ಕ್ಷೇತ್ರದ ಅಭಿವೃದ್ದಿಗಾಗಿ 25 ಕೋಟಿ ವಿಶೇಷ ಅನುದಾನ ನೀಡಿದ್ದರು, ಈ ಬಾರಿ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ವಿಶೇಷ ಅನುದಾನಕ್ಕಾಗಿ 8 ಸಾವಿರ ಕೋಟಿ ರು. ಗಳನ್ನು ಮೀಸಲಿಟ್ಟಿದ್ದಾರೆ, ಅವರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಪಡೆದು ನಗರದ ಅಭಿವೃದ್ದಿಗಾಗಿ ಹೆಚ್ಚಿನ ಪಾಲನ್ನು ಬಳಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ರೆಹೆನಬಾನು, ಸದಸ್ಯರಾದ ಎಸ್.ಪಿ. ಮಹೇಶ್, ಗಂಗಾಧರ್, ಮಹೇಶ್ ಅತ್ತಿಖಾನೆ, ಮೀನಾಕ್ಷಿ ನಾಗರಾಜು, ಮಂಜುಳ ಅನಂತು, ಪ್ರದೀಪ್, ಸಿದ್ದರಾಜು, ನಾಗಮಣಿ, ಮಂಗಳಮ್ಮ, ಖಾಲೀದ್, ಗಾಯಿತ್ರಿ ಮೋಹನ್, ಯೋಗೇಶ್, ಮಹದೇವಪ್ರಸಾದ್, ವಸಂತ, ಶ್ವೇತಲಕ್ಷ್ಮಿ, ಗಿರೀಶ್ ಬಾಬು, ಪಿ.ದೇವ, ನಂದಿನಿ, ಸಿದ್ದಿಕ್, ಎಇಇ ಮಹೇಶ್, ಪರಿಸರ ಎಂಜಿನಿಯರ್ ಮೈತ್ರಾದೇವಿ, ಆರೋಗ್ಯಾಧಿಕಾರಿಗಳಾದ ರೇಖಾ, ವಂಸತ್ ಕುಮಾರ್ ನಗರಸಭಾ ಕಚೇರಿ ಸಿಬ್ಬಂದಿ ಇದ್ದರು.