ನರಹರಿತೀರ್ಥರ ಆರಾಧನೆ ಮಹೋತ್ಸವ: ಮತ್ತೆ ಉತ್ತರಾದಿಮಠದ ಪರ ತೀರ್ಪು

| Published : Jan 21 2025, 12:31 AM IST

ನರಹರಿತೀರ್ಥರ ಆರಾಧನೆ ಮಹೋತ್ಸವ: ಮತ್ತೆ ಉತ್ತರಾದಿಮಠದ ಪರ ತೀರ್ಪು
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿಯಲ್ಲಿ ನರಹರಿ ತೀರ್ಥರ ಆರಾಧನೆ ಮತ್ತೊಮ್ಮೆ ಉತ್ತರಾದಿಮಠ ಮತ್ತು ಮಂತ್ರಾಲಯ ಮಠದ ನಡುವೆ ವಿವಾದಕ್ಕೆಡೆ ಮಾಡಿದೆ.

ಹೊಸಪೇಟೆ: ಹಂಪಿಯಲ್ಲಿ ನರಹರಿ ತೀರ್ಥರ ಆರಾಧನೆ ಮತ್ತೊಮ್ಮೆ ಉತ್ತರಾದಿಮಠ ಮತ್ತು ಮಂತ್ರಾಲಯ ಮಠದ ನಡುವೆ ವಿವಾದಕ್ಕೆಡೆ ಮಾಡಿದೆ. ಧಾರವಾಡ ಹೈಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಉತ್ತರಾದಿಮಠದಿಂದ ಸೋಮವಾರ ಸಂಜೆಯಿಂದ ಪೂಜೆ ಕೈಗೊಳ್ಳಲಾಯಿತು.

ಈ ನಡುವೆ ಮಂತ್ರಾಲಯ ಮಠದಿಂದಲೂ ಸೋಮವಾರ ಬೆಳಗ್ಗೆಯೇ ಹಂಪಿಯ ನಡುಗಡ್ಡೆಯಲ್ಲಿ ರಾಯರ ಮಠದಿಂದ ನರಹರಿ ತೀರ್ಥರ ಪೂರ್ವಾರಾಧನೆ ನೆರವೇರಿಸಲಾಯಿತು.

ನರಹರಿ ತೀರ್ಥರ ಪೂಜಾ ವಿಚಾರದಲ್ಲಿ ರಾಯರಮಠ, ಉತ್ತರಾದಿ ಮಠದ ನಡುವೆ ವಿವಾದ ನಡೆದಿತ್ತು. ರಾಯರ ಮಠಕ್ಕೆ ನ್ಯಾಯಾಲಯದಿಂದ ಹಾಕಿದ ನಿರ್ಬಂಧವನ್ನು ಉಚ್ಚ ನ್ಯಾಯಾಲಯ ಇತ್ತೀಚೆಗೆ ತೆರವು ಮಾಡಿ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಉತ್ತಾರಾದಿಮಠದಿಂದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಯಥಾಸ್ಥಿತಿ ಕಾಪಾಡುವಂತೆ ತೀರ್ಪು ನೀಡಿತ್ತು. ಆದರೆ, ಯಥಾಸ್ಥಿತಿ ಎಂಬ ತೀರ್ಪು ಗೊಂದಲವಾಗಿತ್ತು. ಕಳೆದ ಎರಡು ದಿನಗಳಿಂದ ಪೊಲೀಸ್ ಇಲಾಖೆ, ತಹಸೀಲ್ದಾರ್ ನೇತೃತ್ವದಲ್ಲಿ ಎರಡು ಮಠಗಳ ಪ್ರಮುಖರೊಂದಿಗೆ ಸಭೆ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ.

ಬೆಳಗ್ಗೆ 4 ಗಂಟೆಯಿಂದ ನರಹರಿ ತೀರ್ಥರ ಪೂರ್ವಾರಾಧನೆ ರಾಯರಮಠದಿಂದ ನಡೆದಿದೆ. ಉತ್ತರಾದಿಮಠದವರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದು, ಸೋಮವಾರ ಶ್ರೀಮಠದ ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ನರಹರಿ ತೀರ್ಥರ ಬೃಂದಾವನಕ್ಕೆ ಆಗಮಿಸಿ ಪೂಜಾ ಕೈಂಕರ್ಯ ಕೈಗೊಂಡರು. ಹೈಕೋರ್ಟ್‌ ತೀರ್ಪು ಬಂದ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದ ಭಕ್ತರು ಬೃಂದಾವನ ಸ್ಥಳದಿಂದ ಹೊರ ಬಂದರು. ಹಂಪಿ ಠಾಣೆ ಪೊಲೀಸರು ಬಂದೋಬಸ್ತ್‌ ಕೈಗೊಂಡಿದ್ದರು.

ಉತ್ತರಾದಿಮಠದ ಪರ ತೀರ್ಪು: ರಾಯರಮಠ, ಉತ್ತರಾದಿಮಠದ ನಡುವೆ 1998ರಿಂದಲೂ ನರಹರಿ ತೀರ್ಥರ ಆರಾಧನೆ ನಿಮಿತ್ತ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಧಾರವಾಡ ಹೈಕೋರ್ಟ್‌ ನೀಡಿದ ತೀರ್ಪಿನಿಂದ ಮಂತ್ರಾಲಯ ಮಠದವರು ಪೂಜೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಲಾಗಿತ್ತು. ಸರ್ವೋಚ್ಚ ನ್ಯಾಯಾಲಯ ಯಥಾಸ್ಥಿತಿ ಕಾಪಾಡಲು ತೀರ್ಪು ನೀಡಿತ್ತು. ಮತ್ತೆ ಹೈ ಕೋರ್ಟ್‌ ಮೊರೆ ಹೋಗಿದ್ದು, ಉತ್ತರಾದಿಮಠದ ಪರ ತೀರ್ಪು ಬಂದಿದೆ ಎಂದು ನ್ಯಾಯವಾದಿಗಳಾದ ರಮೇಶ್‌ ಕರ್ಣಂ, ಶರತ್‌ ದಂಡಿನ್‌ ತಿಳಿಸಿದರು.

ನಗರದ ಉತ್ತರಾದಿಮಠದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಾಲಯ ಮಠದವರು ಈ ದಿನ ಪೂಜೆ ಸಲ್ಲಿಸಿದ್ದಾರೆ. ನಾವು ಈ ದಿನ ಬಂದ ನ್ಯಾಯಾಲಯದ ತೀರ್ಪಿನ ಪ್ರಕಾರ ನಡೆದುಕೊಳ್ಳುತ್ತೇವೆ. ಉತ್ತರಾದಿಮಠದಿಂದ ಆರಾಧನೆ ಕೂಡ ನಡೆಸಲಾಗುವುದು ಎಂದರು. ಉತ್ತರಾದಿಮಠದ ಶರತ್ ದಂಡಿನ್‌, ಶ್ರೀಕರ ಆಚಾರ್‌, ರಾಮಾ ಚಾರ್‌ ಮತ್ತಿತರರಿದ್ದರು.

ಹೈಕೋರ್ಟ್‌ನಲ್ಲಿ ಮಂತ್ರಾಲಯ ಮಠದ ಪರ ತೀರ್ಪು ಬಂದಿತ್ತು. ಉತ್ತರಾದಿಮಠದಿಂದ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿತ್ತು. ಯಥಾಸ್ಥಿತಿ ಕಾಪಾಡಲು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಈಗ ಮತ್ತೆ ಧಾರವಾಡ ಹೈಕೋರ್ಟ್‌ ಉತ್ತರಾದಿಮಠದ ಪರ ತೀರ್ಪು ನೀಡಿದೆ. ಶ್ರೀಮಠದಿಂದ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗುವುದು ಎನ್ನುತ್ತಾರೆ ಮಂತ್ರಾಲಯ ಮಠದ ಭಕ್ತ ಗುರುರಾಜ್‌ ದಿಗ್ಗಾವಿ.