ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಿ. ಒಳ್ಳೆಯ ವಾತಾವರಣ ಇರುವ ಶಾಲೆ, ಪ್ರೋತ್ಸಾಹ ನೀಡುವ ಪೋಷಕರು, ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಶಿಕ್ಷಕರು ಒಂದೆಡೆ ಸೇರಿದರೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.ಅವರು ನಗರದ ಕನ್ನಿಕಾ ಆಂಗ್ಲ ಮಾಧ್ಯಮ ಶಾಲಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಇಂದಿನ ಸ್ಪರ್ಧಾಯುಗದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನವನ್ನು ತಿಳಿಸಿ ಕೊಡುವಂತಹ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಎಸ್.ಶಿವಲಿಂಗಪ್ಪ, ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಈ ಶಾಲೆಯಲ್ಲಿ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳು ಮರಗಳಲ್ಲಿ ರಾಗಿ ತೂರಿ ನಂತರ ರಾಶಿ ಪೂಜೆಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮ "ಜನಪದ ಸಂಭ್ರಮ " ಎಂಬ ಶೀರ್ಷಿಕೆಯಡಿ ನಡೆದು ವೀರಗಾಸೆ, ಕೋಲಾಟ, ಯಕ್ಷಗಾನ, ಸುಗ್ಗಿಯ ಕುಣಿತ, ಮತ್ತು ವಿವಿಧ ರೀತಿಯ ಜನಪದ ನೃತ್ಯಗಳು ಹಾಗೂ ಅನೇಕ ರಾಜ್ಯಗಳ ನೃತ್ಯ ಪ್ರದರ್ಶನಗಳ ಮೂಲಕ ಭಾರತೀಯ ವಿವಿಧ ಗ್ರಾಮೀಣ ಮತ್ತು ಜಾನಪದ ಸಂಸ್ಕೃತಿಯನ್ನು ಬಿಂಬಿಸಲಾಯಿತು, ಇದು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಪರಿಕಲ್ಪನೆ, ಸಹ ಶಿಕ್ಷಕರು ಸಾಥ್ ನೀಡಿದ್ದರು. ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮೆಚ್ಚುಗೆ ಪಡೆಯಿತು.
ಮಾಜಿ ಪುರಸಭಾ ಅಧ್ಯಕ್ಷ ಯೋಗೀಶ್ ಅವರು ತಮ್ಮ ಮಾತಿನಲ್ಲಿ ಮಕ್ಕಳಿಗೆ ಹೊರಗಿನ ಪ್ರಪಂಚದ ಅರಿವು ಮೂಡಿಸುವ ಪ್ರಯತ್ನ ಆಗಬೇಕು. ಅಂದರೆ ಶಿಕ್ಷಣದ ಜೊತೆಯಲಿ ಮಕ್ಕಳಲ್ಲಿರುವ ಯಾವುದಾದರೂ ಪ್ರತಿಭೆ ಹೊರತರಲು ಶಿಕ್ಷಕರು ಪೋಷಕರು ಆಸಕ್ತಿ ತೋರಬೇಕು. ಈ ಶಾಲೆ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹೆಸರು ಮಾಡಿದೆ ಎಂದರು.ಗೌರಮ್ಮ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಶಾಲೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿ, ಈ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಬೋಧಕರಲ್ಲಿ ಬದ್ಧತೆ ಇದೆ. ತಮ್ಮ ಕರ್ತವ್ಯವನ್ನು ಸಮರ್ಥವಾಗಿ ಮಾಡುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಶಾಲೆ ಒಳ್ಳೆಯ ಹೆಸರು ಪಡೆದಿದೆ ಎಂದರು.
ಗೌರಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಧನಂಜಯ ಮೂರ್ತಿ, ಕನ್ನಿಕಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಎಸ್. ಲತಾ ರಾಜೇಶ್ ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲಾ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಎಲ್ಲರಿಗೂ ಕೃತಜ್ಞತೆ ಹೇಳಿದರು.