ಉಡುಪಿ: ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳು ರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರವಾಗಿರುವುದು ಜಿಲ್ಲೆ ಮತ್ತು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.ಕೇಂದ್ರ ಪಂಚಾಯತ್ ರಾಜ್ ಇಲಾಖೆ ವತಿಯಿಂದ ದೆಹಲಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಗ್ರಾಮ ಪಂಚಾಯಿತಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಭಾಗವಹಿಸಿದ್ದು, ಪುರಸ್ಕೃತ ಪಂಚಾಯಿತಿ ಮುಖ್ಯಸ್ಥರನ್ನು ಅಭಿನಂದಿಸಿದರು.ಭಾರತದಾದ್ಯಂತ ಆಯ್ಕೆಯಾದ 28 ಗ್ರಾಮ ಪಂಚಾಯಿತಿಗಳ ಪೈಕಿ ಕರ್ನಾಟಕ ರಾಜ್ಯದ 6 ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು, ಅವುಗಳಲ್ಲಿ 5 ಗ್ರಾಮ ಪಂಚಾಯಿತಿಗಳು ಉಡುಪಿ ಜಿಲ್ಲೆಯದ್ದಾಗಿವೆ. ವಂಡ್ಸೆ, ಮಡಾಮಕ್ಕಿ, ಹಕ್ಲಾಡಿ, ಸಾಣೂರು ಹಾಗೂ ಮುದ್ರಾಡಿ ಗ್ರಾಮ ಪಂಚಾಯಿತಿಗಳು ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನವಾಗಿದ್ದು, ಕೇಂದ್ರ ಸರ್ಕಾರದಿಂದ ಒಂದು ಕೋಟಿ ರುಪಾಯಿವರೆಗೆ ವಿಶೇಷ ಅನುದಾನ ಪಡೆಯಲಿವೆ.ಈ ಸಾಧನೆಗೆ ಕಾರಣಕರ್ತರಾದ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಸಂಸದರು ಅಭಿನಂದಿಸಿದರು.

ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮತ್ತು ಮುಖ್ಯ ಯೋಜನಾಧಿಕಾರಿ ಡಾ. ಉದಯಕುಮಾರ್ ಇದ್ದರು.