ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ನದಿಯ ಐತಿಹಾಸಿಕ ಸೇತುವೆಯ ಪುನಶ್ಚೇತನ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ರೋಟರಿ ಕುಶಾಲನಗರ ವತಿಯಿಂದ ನಡೆಯುತ್ತಿರುವ 1846ರಲ್ಲಿ ನಿರ್ಮಾಣಗೊಂಡ ಪ್ರೆಶರ್ ಪೇಟೆ ಬ್ರಿಡ್ಜ್ ಪುನಶ್ಚೇತನ ಕಾಮಗಾರಿ ಹಿನ್ನೆಲೆಯಲ್ಲಿ ಸ್ವಚ್ಛತೆಯೊಂದಿಗೆ ಸೇತುವೆಯ ಎರಡೂ ಭಾಗಗಳಲ್ಲಿ ಕಬ್ಬಿಣದ ಮೆಶ್ ಅಳವಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ನದಿಯ ಐತಿಹಾಸಿಕ ಸೇತುವೆಯ ಪುನಶ್ಚೇತನ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ರೋಟರಿ ಕುಶಾಲನಗರ ವತಿಯಿಂದ ನಡೆಯುತ್ತಿರುವ 1846ರಲ್ಲಿ ನಿರ್ಮಾಣಗೊಂಡ ಪ್ರೆಶರ್ ಪೇಟೆ ಬ್ರಿಡ್ಜ್ ಪುನಶ್ಚೇತನ ಕಾಮಗಾರಿ ಹಿನ್ನೆಲೆಯಲ್ಲಿ ಸ್ವಚ್ಛತೆಯೊಂದಿಗೆ ಸೇತುವೆಯ ಎರಡೂ ಭಾಗಗಳಲ್ಲಿ ಕಬ್ಬಿಣದ ಮೆಶ್ ಅಳವಡಿಸಲಾಗಿದೆ.

ಸುಮಾರು 179 ವರ್ಷಗಳ ಇತಿಹಾಸ ಹೊಂದಿರುವ ಸೇತುವೆಯಲ್ಲಿ ಹಲವು ಹೂಕುಂಡಗಳನ್ನು ನಿರ್ಮಿಸಲಾಗಿದ್ದು, ಸೇತುವೆಯ ಮೇಲ್ಭಾಗದಲ್ಲಿ ಟೈಲ್ಸ್ ಗಳನ್ನು ಅಳವಡಿಸಲಾಗಿದೆ. ಸುಂದರ ಉದ್ಯಾನವನ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಸೇತುವೆ ಮೇಲ್ಭಾಗದಲ್ಲಿ ವಿದ್ಯುತ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ತಿಳಿಸಿದ್ದಾರೆ.

ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಅನುದಾನದೊಂದಿಗೆ ಸ್ಥಳೀಯ ದಾನಿಗಳ ಸಹಕಾರ ಮೂಲಕ ರೋಟರಿ ಕುಶಾಲನಗರ ಅಧ್ಯಕ್ಷರಾದ ಮನು ಪೆಮ್ಮಯ್ಯ ಅವರ ಉಸ್ತುವಾರಿಯಲ್ಲಿ ಕಾಮಗಾರಿ ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಐತಿಹಾಸಿಕ ಸೇತುವೆ ಬಣ್ಣ ಬಳಿದು ಸಿಂಗಾರಗೊಂಡಿದೆ. ಈ ತಿಂಗಳ ಮೂರನೇ ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ವಾಯು ವಿಹಾರಕ್ಕೆ ತೆರಳುವ ನಾಗರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಚುಗಳನ್ನು ಅಳವಡಿಸಲಾಗುವುದು. ಕುಶಾಲನಗರ ಪುರಸಭೆ ಮೂಲಕ ಹೂವಿನ ಕುಂಡಗಳ ನಿರ್ವಹಣೆಗೆ ಮತ್ತು ಭದ್ರತೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪುರಾತನ ಸೇತುವೆಯನ್ನು ಉಳಿಸಿಕೊಂಡು ಪುನಶ್ಚೇತನ ಮಾಡುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಆಡಳಿತ ಮತ್ತು ಸಂಘ ಸಂಸ್ಥೆಗಳಿಗೆ ಮನವಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಕೊಡಗು ಜಿಲ್ಲೆಯ ಗಡಿ ಭಾಗ ಕುಶಾಲನಗರದಲ್ಲಿ ಜಿಲ್ಲೆಯ ಪ್ರವೇಶ ದ್ವಾರದಲ್ಲಿ ಅಂದವಾದ ಉದ್ಯಾನವನ ಒಂದು ನಿರ್ಮಾಣಗೊಳ್ಳುತ್ತಿರುವ ಮೂಲಕ ಪ್ರವಾಸಿಗರಿಗೆ ಕುಶಾಲನಗರ ಪ್ರವೇಶ ದ್ವಾರ ಆಕರ್ಷಣೆ ಕೇಂದ್ರವಾಗಿ ಮಾರ್ಪಡುವ ಸಾಧ್ಯತೆ ಅಧಿಕವಾಗಿದೆ.