ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ಯಿ ಸಿದ್ದರಾಮಯ್ಯ ನೆರವೇರಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಿರಲಿದ್ದಾರೆ.
ಗದಗ: ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬುವ ಉದ್ದೇಶದಿಂದ 18ನೇ ರಾಷ್ಟ್ರೀಯ ಪಂಚಾಯಿತಿ ಪರಿಷತ್ ಸಮ್ಮೇಳನವನ್ನು ಡಿ. 13 ಮತ್ತು 14ರಂದು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಡಾ. ಸುರೇಶ ನಾಡಗೌಡ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಹಾಗೂ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಮತ್ತು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಾಯೋಜಕತ್ವದಲ್ಲಿ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಿರಲಿದ್ದಾರೆ. ಅತಿಥಿಗಳಾಗಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಡಿ.ಆರ್. ಪಾಟೀಲ, ಸುಬೋದ್ ಕಾಂತ್ ಸಾಹಾಯ್ ಸೇರಿದಂತೆ ಸಂಸದರು, ಶಾಸಕರು ಹಾಗೂ ಗ್ರಾಂಪಂ, ತಾಪಂ, ಜಿಪಂ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.ಜನಸಾಮಾನ್ಯರ ನೇರ ಭಾಗವಹಿಸುವಿಕೆಯ ಆಶಯದಿಂದ ರೂಪಿಗೊಂಡ ಪಂಚಾಯತ್ ರಾಜ್ ವ್ಯವಸ್ಥೆಗೆ ರಾಷ್ಟ್ರಮಟ್ಟದಲ್ಲಿ ಮಾರ್ಗದರ್ಶನ ನೀಡುತ್ತಿರುವ ಅಖಿಲ ಭಾರತ ಪಂಚಾಯತ್ ಪರಿಷತ್(ಎಐಪಿಪಿ)1958ರಿಂದ ಪಂಚಾಯಿತಿ ಸಂಸ್ಥೆಗಳ ಬಲವರ್ಧನೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಪಂಚಾಯಿತಿ ಸಂಸ್ಥೆಗಳ ಬಲವರ್ಧನೆ, ವಿಕೇಂದ್ರೀಕೃತ ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಿರಂತರ ಕೊಡುಗೆಯನ್ನು ನೀಡುತ್ತಿದ್ದು, ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರಾಷ್ಟ್ರಮಟ್ಟದ ಮಾದರಿಯಾಗಿ ರೂಪಿಸಲು ಸಹಕಾರಿಯಾಗಿದೆ ಎಂದರು.
ಈ ವೇಳೆ ಡಾ. ಅಶೋಕ ಚೌವಾಣ್, ವಿ.ವೈ. ಘೋರ್ಪಡೆ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಮಾಜಿ ಕೇಂದ್ರ ಸಚಿವ ಸುಬೋಯ್ ಕಾಂತ್ ಸಾಹಾಯ್ ಸೇರಿದಂತೆ ಹಲವರು ಇದ್ದರು.ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಈ ಸಮ್ಮೇಳನ ವಿಶೇಷ ಮಹತ್ವ ಹೊಂದಿದೆ. 1962ರಲ್ಲಿ ಗ್ಲಾಸ್ ಹೌಸ್‌ನಲ್ಲಿ ಮೊದಲ ಸಮ್ಮೆಳನ ನಡೆದಿತ್ತು. ಅಂದು ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರು ಕಾರ್ಯಕ್ರಮ ಉದ್ಘಾಟಿಸಿದ್ದರು. ಇದಾದ ನಂತರ 2ನೇ ಸಮ್ಮೆಳನ ಗದಗದಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕುಲಪತಿ ಡಾ. ಸುರೇಶ ನಾಡಗೌಡ ಮಾತನಾಡಿದರು.ಸಮ್ಮೇಳನದ ಮಹತ್ವ....
ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ಮಹಾತ್ಮ ಗಾಂಧೀಜಿಯ ಗ್ರಾಮಸ್ವರಾಜ್ಯ ಪರಿಕಲ್ಪನೆ, ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಬಲವರ್ಧನೆ, ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಮತ್ತು ಗ್ರಾಮೀಣ ಭಾರತದ ಸುಸ್ಥಿರ ಅಭಿವೃದ್ಧಿ ಕುರಿತಾಗಿ ರಾಷ್ಟ್ರಮಟ್ಟದ ಸಮಗ್ರ ಚಿಂತನೆ ಹಾಗೂ ನೀತಿ ಸಂವಾದಕ್ಕೆ ಪ್ರಮುಖ ವೇದಿಕೆಯಾಗಲಿದೆ.