ಕಾಪು ರೈತಕೇಂದ್ರದ ವತಿಯಿಂದ ಶಿರ್ವದ ಕೃಷಿಕ ಬೆಟ್ಸಿ ಅರಾನ್ಹಾ ನಿವಾಸದಲ್ಲಿ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ಪರಿಸರದ ಕೃಷಿಕರಿಗಾಗಿ ನೈಸರ್ಗಿಕ ಕೃಷಿ ಪ್ರಾತಿಕ್ಷಿಕೆ ನೆರವೇರಿತು.
ಕಾಪು: ನೈಸರ್ಗಿಕ ಕೃಷಿ ಎಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಲ್ಲದೆ ಭೂಮಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಸ್ಥಳೀಯ ಸಂಪನ್ಮೂಲಗಳಾದ ದನದ ಸೆಗಣಿ, ಗೋಮೂತ್ರ, ಮಲ್ಚಿಂಗ್ ಬಳಸಿ ಜಮೀನಿನಲ್ಲಿ ಲಭ್ಯ ಇರುವ ಜೀವರಾಶಿಗಳನ್ನು ಆಧರಿಸಿ ಮಾಡುವ ಕೃಷಿ ಪದ್ಧತಿಯಾಗಿದೆ ಎಂದು ಪಾದೂರು ಗ್ರಾಮದ ಪ್ರಗತಿಪರ ಕೃಷಿಕ, ಸಂಪನ್ಮೂಲವ್ಯಕ್ತಿ ನಿತ್ಯಾನಂದ ನಾಯಕ್ ಪಾಲಮೆ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಕಾಪು ರೈತಕೇಂದ್ರದ ವತಿಯಿಂದ ಶಿರ್ವದ ಕೃಷಿಕರಾದ ಬೆಟ್ಸಿ ಅರಾನ್ಹಾ ನಿವಾಸದಲ್ಲಿ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ಪರಿಸರದ ಕೃಷಿಕರಿಗಾಗಿ ಏರ್ಪಡಿಸಿದ ನೈಸರ್ಗಿಕ ಕೃಷಿ ಪ್ರಾತಿಕ್ಷಿಕೆ ಸಹಿತ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಈ ಮಾದರಿಯ ಕೃಷಿಯಲ್ಲಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಅಲ್ಲದೆ ಮಣ್ಣಿನ ಆರೋಗ್ಯವನ್ನೂ ಕಾಪಾಡುತ್ತದೆ ಎಂದರು.
ನೈಸರ್ಗಿಕ ಕೃಷಿಕ ಘಟಕಗಳಾದ ಜೀವಾಮೃತ ಹಾಗೂ ಬೀಜಾಮೃತ ತಯಾರಿಕೆ ಹಾಗೂ ಬಳಸುವ ವಿಧಾನದ ಬಗ್ಗೆ ಪ್ರಾತಿಕ್ಷಿಕೆ ಮಾಹಿತಿ ನೀಡಿದರು. ಹಿರಿಯರಾದ ಜೆರಾಲ್ಡ್ ಅರಾನ್ಹಾ ಸಹಕರಿಸಿದರು.ಕೃಷಿಕರಾದ ಪ್ರಕಾಶ್ ಪಾಲಮೆ, ಲಕ್ಷ್ಮಣ ನಾಯಕ್ ಪಾಲಮೆ, ಮ್ಯಾಕ್ಸಿಮ್ ಫೆರ್ನಾಡಿಸ್, ಜೆರೋಮ್ ಕಸ್ತಲಿನೊ ಬಿ.ಸಿ.ರೋಡ್, ಗಿಲ್ಬರ್ಟ್ ಮೋನಿಸ್, ರೊನಾಲ್ಡ್ ಮೋನಿಸ್, ಶಿಲ್ಪಾ ಪ್ರಭು ಪಾಲಮೆ, ಡಯಾನಾ ಫೆರ್ನಾಂಡಿಸ್ ಸಹಿತ ೪೦ಕ್ಕೂ ಅಧಿಕ ಕೃಷಿಕರು ಪ್ರಯೋಜನ ಪಡೆದುಕೊಂಡರು.
ಕಾಪು ರೈತ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ ಸ್ವಾಗತಿಸಿ, ವಂದಿಸಿದರು. ಕೃಷಿ ಸಖಿಯರಾದ ಪ್ರಜ್ಞಾಸಂತೋಷ್, ಕೇಶವತಿ ಸಹಕರಿಸಿದರು.