ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಸರ್ಕಾರದ ನಡೆ ವಿರೋಧಿಸಿ ಶರಾವತಿ ಉಳಿಸಿ ಸಮಿತಿಯ ವತಿಯಿಂದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಸಭೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊನ್ನಾವರ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಸರ್ಕಾರದ ನಡೆ ವಿರೋಧಿಸಿ ಶರಾವತಿ ಉಳಿಸಿ ಸಮಿತಿಯ ವತಿಯಿಂದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಸಭೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.ಸರ್ಕಾರದ ಯೋಜನಾ ವರದಿ ಮತ್ತು ಈಗಿನ ಇಂಧನ ಸಚಿವರು ಕೊಡುತ್ತಿರುವಂತಹ ಹೇಳಿಕೆಗಳಿಗೆ ಅಜಗಜಾಂತರ ವ್ಯತ್ಯಾಸ ಇರುವುದರಿಂದ ಈ ಯೋಜನೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ. ಯೋಜನಾ ವರದಿಯ ಪ್ರಕಾರ ಸುರಂಗದ ಉದ್ದ 11634 ಮೀಟರ್ ಎಂದು ನಮೂದಿಸಲಾಗಿದೆ. ಆದರೆ ಇಂಧನ ಸಚಿವರ ಪ್ರಕಾರ ಕೇವಲ 7 ಕಿಮೀ ಸುರಂಗ ಎಂದು ಹೇಳಲಾಗಿದೆ. ಅದೇ ಪ್ರಕಾರ ಯೋಜನಾ ವರದಿಯ ಪ್ರಕಾರ ಒಟ್ಟು ಅವಶ್ಯವಿರುವ ಸ್ಪೋಟಕದ ಪ್ರಮಾಣ ಸುಮಾರು 18 ಸಾವಿರ ಮೆಟ್ರಿಕ್ ಟನ್ ಆದರೆ ಇಂಧನ ಸಚಿವರ ಪ್ರಕಾರ ಕೇವಲ 1800 ಮೆಟ್ರಿಕ ಟನ್ ಸ್ಪೋಟದ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.
ಅದೇ ಪ್ರಕಾರ ಕೆಪಿಸಿ ಮಂಡಳಿ ಕೂಡ ಹಲವು ವಿಚಾರಗಳನ್ನು ಜನರಿಂದ ಮರೆಮಾಚುತ್ತಿದೆ. ಇಂಧನ ಸಚಿವರು ಕೇವಲ ಪೈಪ್ ಲೈನ್ ಮಾತ್ರ ಅಳವಡಿಸುತ್ತೇವೆ ಎಂದು ಹೇಳುತ್ತಿದ್ದಾರೆ ಆದರೆ ಸುರಂಗವಿಲ್ಲದೆ ಪೈಪ್ ಲೈನ್ ಹೇಗೆ ಅಳವಡಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.ಕೇವಲ ವಿದ್ಯುತ್ ಉತ್ಪಾದನೆಯ ಬಗ್ಗೆ ಮಾತ್ರ ಹೇಳಲಾಗುತ್ತಿದೆ ವಿದ್ಯುತ್ ವಿತರಣೆಯ ಸಂದರ್ಭದಲ್ಲಿ ಯಾವ ಮಟ್ಟದ ಕಾಡಿನ ನಾಶವಾಗುತ್ತದೆ ಎಂದು ಯಾರು ಹೇಳುತ್ತಿಲ್ಲ. ಸಿಂಗಳೀಕದಂತಹ ಹಲವು ವಿನಾಶದ ಅಂಚಿನಲ್ಲಿರುವಂತಹ ಜೀವ ಪ್ರಭೇದಗಳ ಸುರಕ್ಷತೆ ಕನಸಿನ ಮಾತಾಗಿದೆ. ಹಲವು ಅಮೂಲ್ಯ ಸಸ್ಯ ಪ್ರಭೇದಗಳು ನಾಶವಾಗಲಿವೆ. ಸ್ಪೋಟಕದ ತೀವ್ರತೆಗೆ ಗುಡ್ಡಗಳು ಜರಿದು ಸಂಪೂರ್ಣ ಪ್ರದೇಶ ಜನ ವಸತಿಗೆ ಅಯೋಗ್ಯವಾಗಲಿದೆ. ಈಗಿನ ಹಲವು ಯೋಜನೆಗಳ ಪರಿಹಾರ ಇನ್ನೂ ಸಿಕ್ಕದೆ ಇರುವುದರಿಂದ ಈ ಯೋಜನೆಯ ಪರಿಹಾರ ಕನಸಿನ ಮಾತೆ ಸರಿ. ಈಗಾಗಲೇ ನದಿಯ ಎಡಬಲ ದಂಡೆಯ ಹಲವು ಗ್ರಾಮಗಳು ಉಪ್ಪು ನೀರಿನಿಂದ ಆವೃತವಾಗಿವೆ.
ಇನ್ನು ಈ ಯೋಜನೆ ಜಾರಿಯಾದಲ್ಲಿ ಇನ್ನೂ ಹಲವು ಗ್ರಾಮಗಳು ಕುಡಿಯುವ ನೀರಿಗೆ ಸಂಕಷ್ಟವನ್ನು ಅನುಭವಿಸಲಿವೆ. ಒಟ್ಟಾರೆ ಈ ಪ್ರದೇಶದ ಜನರಿಗೆ ಶಾಪವಾಗಲಿರುವ ಈ ಯೋಜನೆ ಯಾವ ಕಾರಣಕ್ಕೂ ಕೂಡ ಜಾರಿಯಾಗಬಾರದು ಎಂಬುದು ಈ ಭಾಗದ ಎಲ್ಲಾ ಜನರ ಒಕ್ಕರಲ ಅಭಿಪ್ರಾಯವಾಗಿದೆ.ಸಭೆಯಲ್ಲಿ ಹಿರಿಯ ಮುಖಂಡರಾದ ಜೆ.ಟಿ. ಪೈ, ಕೇಶವ ನಾಯ್ಕ ಬಳ್ಕೂರ್, ಸೂರಜ್ ನಾಯ್ಕ್ ಸೋನಿ, ವಿಕ್ರಂ ನಾಯ್ಕ್, ಚಂದ್ರಕಾಂತ ಕೊಚರೆಕರ್, ರಾಜೇಶ್ ಭಂಡಾರಿ, ಲೋಕೇಶ್ ಮೇಸ್ತ, ಎಂ.ಎಸ್. ಹೆಗಡೆ, ಮಾಸ್ತಪ್ಪ ನಾಯ್ಕ್, ಸುರೇಶ್ ಹೊನ್ನಾವರ, ವಿಶ್ವನಾಥ್ ನಾಯಕ್ ಮೊದಲಾದವರು ಪಾಲ್ಗೊಂಡಿದ್ದರು.