ಎನ್‌ಡಿಎ ಮೈತ್ರಿಕೂಟ ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು

| Published : Apr 16 2024, 01:02 AM IST

ಸಾರಾಂಶ

ಜಿಲ್ಲೆಯ ಜನರು ಅತ್ಯಂತ ಭಾವನಾತ್ಮಕ ಜೀವಿಗಳು, ಪ್ರಜ್ಞಾವಂತ ಬುದ್ಧಿವಂತರಿದ್ದಾರೆ. ಅಧಿಕಾರದಲ್ಲಿದ್ದವರು ಪ್ರೀತಿ ವಿಶ್ವಾಸದಿಂದ ತಲೆ ತಗ್ಗಿಸಿ ನಡೆದರೆ ಇಲ್ಲಿನ ಜನರು ಅಷ್ಟೇ ಪ್ರೀತಿ ಗೌರವ ಕೊಟ್ಟು ನಿಮ್ಮನ್ನು ಹೊತ್ತು ಮೆರೆಸುತ್ತಾರೆ. ಆನೆ ನಡೆದಿದ್ದೇ ದಾರಿ ಎಂದು ಏನಾದರೂ ತಲೆ ಎತ್ತಿ ನಡೆದರೆ ಏನಾಗುತ್ತದೆ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಬಿಂಡಿಗನವಿಲೆ ವೃತ್ತದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ವ್ಯಕ್ತಿಗತವಾಗಿ ಬಹಳಷ್ಟು ಟೀಕೆ ಮಾಡುವ ಜೊತೆಗೆ ಲಘು ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳಿಂದ ದೇಶದ ರಕ್ಷಣೆ, ಸುಭದ್ರತೆ ಮತ್ತು ಅಭಿವೃದ್ಧಿಗಾಗಿ ಒಂದು ದಿನವೂ ವಿಶ್ರಾಂತಿ ಪಡೆಯದೆ ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರ ಸಾಧನೆ ಮತ್ತು ಕೊಡುಗೆಯಿಂದಾಗಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸಾಧಿಸಲಿದ್ದಾರೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಜಿಲ್ಲೆಯ ಜನರು ಅತ್ಯಂತ ಭಾವನಾತ್ಮಕ ಜೀವಿಗಳು, ಪ್ರಜ್ಞಾವಂತ ಬುದ್ಧಿವಂತರಿದ್ದಾರೆ. ಅಧಿಕಾರದಲ್ಲಿದ್ದವರು ಪ್ರೀತಿ ವಿಶ್ವಾಸದಿಂದ ತಲೆ ತಗ್ಗಿಸಿ ನಡೆದರೆ ಇಲ್ಲಿನ ಜನರು ಅಷ್ಟೇ ಪ್ರೀತಿ ಗೌರವ ಕೊಟ್ಟು ನಿಮ್ಮನ್ನು ಹೊತ್ತು ಮೆರೆಸುತ್ತಾರೆ. ಆನೆ ನಡೆದಿದ್ದೇ ದಾರಿ ಎಂದು ಏನಾದರೂ ತಲೆ ಎತ್ತಿ ನಡೆದರೆ ಏನಾಗುತ್ತದೆ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಸಿದರು.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಸಂಚು ರೂಪಿಸಿದವರು ಯಾರೆಂಬುದು ಇಡೀ ಜಿಲ್ಲೆ ಮತ್ತು ರಾಜ್ಯಕ್ಕೆ ಜನರಿಗೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ನಡೆಸಿದ ರಾಜಕೀಯ ಷಡ್ಯಂತ್ರಕ್ಕೆ ಒಬ್ಬ ಯುವಕ ಬಲಿಯಾದ. ಅಂದೂ ಸಹ ನಾಗಮಂಗಲ ಕ್ಷೇತ್ರದ ಜನರು ನನಗೆ ಹೆಚ್ಚು ಮತ ನೀಡಿದ್ದರು ಎಂದು ಸ್ಮರಿಸಿದರು.

ಈ ಬಾರಿ ಚುನಾವಣೆಗೆ ಅನಿರೀಕ್ಷಿತವಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಹಾಗೂ ಕಾವೇರಿಯ ರಕ್ಷಣೆಗಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಅನಿವಾರ್ಯತೆ ಇದೆ. ಹಾಗಾಗಿ ಮತದಾರರು ಹೆಚ್ಚಿನ ಮತ ಕೊಟ್ಟು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ನಂತರ ಬೆಳ್ಳೂರು, ದೇವಲಾಪುರ ಹಾಗೂ ಚಿಣ್ಯ ವೃತ್ತದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಪ್ರಕಾಶ್ ಸೇರಿದಂತೆ ಹಲವರು ಇದ್ದರು.