ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ: ಶಾಸಕ ಶರತ್‌

| Published : Mar 24 2025, 12:30 AM IST

ಸಾರಾಂಶ

ನೀರಿನ ಸಮಸ್ಯೆ

ಹೊಸಕೋಟೆ: ನಗರ ಭಾಗದಲ್ಲಿ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಳವೆಬಾವಿ ಕೊರೆಸುವ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಗರದ ವಾರ್ಡ್ ನಂ.1ರಲ್ಲಿ ಕೊಳವೆಬಾವಿಗೆ ಮೋಟಾರ್ ಪಂಪ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಪ್ಪಾರ ಹಳ್ಳಿ ಕೆರೆ ಹಾಗೂ ದೊಡ್ಡ ಕೆರೆ ಏರಿಯಲ್ಲಿ ಕೊರೆಸಿರುವ ಕೊಳವೆ ಬಾವಿಗಳಿಗೆ ನಿರಂತರ ವಿದ್ಯುತ್ ಪೂರೈಸಿ ನೀರು ಒದಗಿಸಲಾಗುತ್ತದೆ ಎಂದರು.

ನಗರದಲ್ಲಿ ವಿದ್ಯುತ್ ವ್ಯವಸ್ಥೆ ಬದಲಿಸುವ ಸಲುವಾಗಿ ಅಂಡರ್ ಕೇಬಲಿಂಗ್ ಕಾಮಗಾರಿ ನಡೆಯುತ್ತಿದ್ದು ಈಗಾಗಲೇ 11ಕೆ.ವಿ. ಫೀಡರ್ ಅಳವಡಿಸುವ ಕೆಲಸ ಅಂತಿಮ ಹಂತ ತಲುಪಿದೆ. ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಲೋ ಟೆನ್ಷನ್ ವಿದ್ಯುತ್ ಕಾಮಗಾರಿ ಆರಂಭಿಸುವ ಕಾರಣ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಈ ಶಾಶ್ವತ ಅಂಡರ್ ಕೇಬಲಿಂಗ್ ಕಾಮಗಾರಿಗೆ ಸಾರ್ವಜನಿಕರು ಸ್ವಲ್ಪ ಸಹಕಾರ ನೀಡಿದರೆ ಮುಂದಿನ 25-30 ವರ್ಷಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

ಬಿಜೆಪಿ ಶಾಸಕರ ಅಮಾನತು ಸ್ಪೀಕರ್ ನಡೆ ಸರಿ:

ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದಡಿ ಪ್ರತಿಪಕ್ಷ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದು, ಸ್ಪೀಕರ್ ಯುಟಿ ಖಾದರ್ ಅವರ ಈ ನಿರ್ಣಯವನ್ನು ಸಮರ್ಥಿಸಿಕೊಂಡಿರುವ ಶಾಸಕ ಶರತ್, ಅಸ್ತಿತ್ವದಲ್ಲಿರುವ ಸದನದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿರುವ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವುದು ಸರಿಯಾದ ಕ್ರಮ. ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಜೆಪಿಯ ಶಾಸಕರು ಸ್ಪೀಕರ್ ಪೀಠದ ಮೇಲೇರಿ ಹಾಗೂ ಸದನದ ಬಾವಿಯ ಮುಂದೆ ಪ್ರತಿಭಟನೆ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸಿದ್ದಲ್ಲದೆ ವಿಧೇಯಕದ ಪ್ರತಿಯನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ ಘೋಷಣೆಗಳನ್ನು ಕೂಗಿರುವುದು ಸ್ಪೀಕರ್ ಹುದ್ದೆಗೆ ಹಾಗೂ ಪೀಠಕ್ಕೆ ಮಾಡಿದ ಅಪಮಾನ ಆಗಿದೆ. ಅಸ್ತಿತ್ವದಲ್ಲಿರುವ ಸದನದ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ನಡೆ ಸರಿ ಇದೆ ಎಂದರು.

ಗುತ್ತಿಗೆಯಲ್ಲಿ ಮೀಸಲು ಕೇವಲ ಮುಸ್ಲಿಮರಿಗಲ್ಲ?

ಮುಸ್ಲಿಂ ಸಮುದಾಯಕ್ಕೆ ಮಾತ್ರ ಶೇ.೪ರಷ್ಟು ಮೀಸಲಾತಿ ನೀಡಲಾಗುತ್ತಿದೆ ಎಂದು ಹೇಳಿದವರು ಯಾರು? ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೂ ಮೀಸಲಾತಿ ನೀಡಲಾಗುತ್ತಿದೆ. ಅದರಲ್ಲಿ ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಂ ಸಮುದಾಯದ ಮಾತ್ರವಲ್ಲ. ಕ್ರಿಶ್ಚಿಯನ್, ಜೈನರು, ಪಾರ್ಸಿ, ಸಿಖ್ ಹೀಗೆ ಹಲವು ಧರ್ಮಗಳೂ ಬರುತ್ತವೆ. ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಗುತ್ತಿಗೆ ಮೀಸಲಾತಿ ನೀಡಲು ತಿದ್ದುಪಡಿ ಮಾಡಲಾಗಿತ್ತು. ಈಗ ಅದಕ್ಕೆ ಅಲ್ಪಸಂಖ್ಯಾತರು, ಹಿಂದುಳಿದವರನ್ನು ಸೇರಿಸಲಾಗುತ್ತಿದೆ. ಬಿಜೆಪಿಯವರು ಧರ್ಮ ಜಾತಿಗಳ ನಡುವೆ ಒಡುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಾಮಾಜಿಕ ಕಾಳಜಿಯಿಂದ ಮೀಸಲು ಕ್ರಮ ಕೊಡಲಾಗಿದೆ ಎಂದು ಶಾಸಕ ಶರತ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಸಕೋಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಸದಸ್ಯ ಜಮುನಾಹರೀಶ್, ಗೌತಮ್, ಮುಖಂಡರಾದ ಬಿ.ವಿ.ಬೈರೇಗೌಡ, ಗೋಪಿನಾಥ್, ನವೀನ್, ಆನಂದ್, ರಾಕೇಶ್, ವಿಷ್ಣು ಇತರರಿದ್ದರು.

ಪೋಟೋ : 23 ಹೆಚ್‌ಎಸ್‌ಕೆ 1

ಹೊಸಕೋಟೆಯ 1ನೇ ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸಿ ಮೋಟಾರ್ ಪಂಪ್ ಅಳವಡಿಸುವ ಕಾಮಗಾರಿಗೆ ಶಾಸಕ ಶರತ್ ಚಾಲನೆ ನೀಡಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಸದಸ್ಯ ಜಮುನಾ, ಗೌತಮ್ ಇತರರಿದ್ದರು.