ನಾನು ಮುಖ್ಯಮಂತ್ರಿಯಾದರೆ ಇದೆಲ್ಲ ಸಮಾಪ್ತಿ ಆಗುತ್ತದೆ : ಬಸನಗೌಡ ಪಾಟೀಲ್ ಯತ್ನಾಳ್

| N/A | Published : Mar 24 2025, 12:30 AM IST / Updated: Mar 24 2025, 01:40 PM IST

BasavanaGowda Patel Yatnal
ನಾನು ಮುಖ್ಯಮಂತ್ರಿಯಾದರೆ ಇದೆಲ್ಲ ಸಮಾಪ್ತಿ ಆಗುತ್ತದೆ : ಬಸನಗೌಡ ಪಾಟೀಲ್ ಯತ್ನಾಳ್
Share this Article
  • FB
  • TW
  • Linkdin
  • Email

ಸಾರಾಂಶ

ನಾನೇನಾದರೂ ಮುಖ್ಯಮಂತ್ರಿಯಾದರೆ ಇದೆಲ್ಲ ಸಮಾಪ್ತಿ ಆಗುತ್ತದೆ ಎಂದು ರಾಜ್ಯ ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

 ಗುಳೇದಗುಡ್ಡ :  ದೇಶವನ್ನು ವಿರೋಧಿಸುವ, ಲವ್ ಜಿಹಾದ್, ಗೋಹತ್ಯೆ ನಡೆಸುವ, ವಕ್ಫ್‌ ಆಸ್ತಿ ನುಂಗಿದ, ಪೊಲೀಸ್ ಸ್ಟೇಷನ್ ಮೇಲೆ ಕಲ್ಲೆಸೆದ, ಪೊಲೀಸ್ ಜೀಪ್ ಮೇಲೆ ಹತ್ತಿ ಭಾಷಣ, ಮಹಿಳಾ ಪೊಲೀಸ್ ಕಾನಸ್ಟೇಬಲ್ ಮೈಮೇಲೆ ಹೋದ ಘಟನೆ ನಡೆದರೂ ಕಾಂಗ್ರೆಸ್ ಏನೂ ಮಾಡಲಿಲ್ಲ. ನಾನೇನಾದರೂ ಮುಖ್ಯಮಂತ್ರಿಯಾದರೆ ಇದೆಲ್ಲ ಸಮಾಪ್ತಿ ಆಗುತ್ತದೆ ಎಂದು ರಾಜ್ಯ ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಭಾನುವಾರ ಪಟ್ಟಣದ ಸಮಸ್ತ ಹಿಂದೂ ಸಮಾಜದ ವತಿಯಿಂದ ಗಚ್ಚಿನಕಟ್ಟಿಯ ಶ್ರೀ ಕೃಷ್ಣದೇವರಾಯ ಹಾಗೂ ಇಮ್ಮಡಿ ಪುಲಕೇಶಿ ವೇದಿಕೆ ಮೇಲೆ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಈ ದೇಶದಲ್ಲಿ ಶಿವಾಜಿ ಮಹಾರಾಜರು ಹುಟ್ಟದೇ ಇದ್ದರೆ ಹಿಂದೂ ಸಮಾಜ ಉಳಿಯುತ್ತಿರಲಿಲ್ಲ. 

ಈ ದೇಶದಲ್ಲಿ ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ಹಿಂದೂಗಳಾಗಿ ಉಳಿದುಕೊಂಡಿದ್ದನ್ನು ನೋಡಿದರೆ ಅವರೆಲ್ಲ ಹಿಂದೂ ಹುಲಿಗಳೇ. ಮುಸ್ಲಿಂ ಅರಸರ ದಬ್ಬಾಳಿಕೆಗೆ ಜಗ್ಗದೇ ಹಿಂದೂಗಳಾಗಿಯೇ ಬದುಕಿದ್ದು ನೋಡಿದರೆ ನಾವು ಅವರ ಸ್ಮರಣೆ ಮಾಡಬೇಕು ಎಂದು ಹೇಳಿದರು.ಈ ದೇಶಕ್ಕೆ ಸ್ವಾತಂತ್ರ್ಯ ನೆಹರೂ ಕುಟುಂಬದಿಂದ ಸಿಕ್ಕಿಲ್ಲ.

 ಶಿವಾಜಿ ಮಹಾರಾಜರಂಥ ನೂರಾರು ದೇಶ ಭಕ್ತರಿಂದ ಸ್ವಾತಂತ್ರ್ಯ ಸಿಕ್ಕಿದೆ. ಇನ್ಮುಂದೆ ಹಿಂದು ಧರ್ಮದ ಬಗ್ಗೆ ಮಾತನಾಡುವ ಮತ್ತೊಂದು ಧರ್ಮದವರನ್ನು ಭಾಯಿ ಭಾಯಿ ಅನ್ನುವ ಸ್ವಾಮೀಗಳಿಗೆ ಕೈ ಮುಗಿಯಬೇಡಿ. ಮದರಸಾ ಗಳಲ್ಲಿ ಏನು ಕಲಿಸುತ್ತಾರೆ ನೋಡಿ, ದೇಶ ಭಕ್ತಿ ಕಲಿಸುತ್ತಿಲ್ಲ. ಮುಸ್ಲಿಂ ಮಹಿಳೆಯರ ರಕ್ಷಣೆಗೆ ಕೋಚಿಂಗ್ ನೀಡಲು ಸರ್ಕಾರ ಹಣ ಖರ್ಚು ಮಾಡಲು ನಿರ್ಧರಿಸಿದೆ. ಅದು ಯಾಕೆ ಎಂದು ಪ್ರಶ್ನಿಸಿ, ಇನ್ನು ಮುಂದೆ ಹಿಂದೂಗಳು ಒಂದಾಗಿ, ಜಾತಿ ನೋಡದೇತುತ್ತಮರನ್ನು ಗೆಲ್ಲಿಸಿ ಅಂದಾಗ ದೇಶ, ಹಿಂದುತ್ವ ಉಳಿಯುತ್ತದೆ ಎಂದು ಸಲಹೆ ನೀಡಿದರು.

ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿ ಮಾತಾನಾಡಿ, ಹಿಂದೂಗಳಿಗೆ ಏನಾದರೂ ಸಮಸ್ಯೆಯಾದರೆ, ಲವ್ ಜಿಹಾದ್, ಗೋಹತ್ಯೆ ನಡೆದರೆ ಅದನ್ನು ತಡೆಗಟ್ಟಲು ಧರ್ಮಕ್ಕಾಗಿ ನಾನು ಜೀವ ಕೊಡಲೂ ಸಿದ್ಧನಿದ್ದೇನೆ. ನಾನು ಸತ್ತರೂ ಚಿಂತೆಯಿಲ್ಲ ಧರ್ಮ ಉಳಿಯಬೇಕು. ಭಾರತೀಯತೆ ವಿರೋಧೀಸುವ ಮುಸ್ಲಿಂ ವಿರೋಧಿಯೇ ಹೊರತು ಭಾರತೀಯತೆಯನ್ನು ಗೌರವಿಸುವ ಮುಸ್ಲಿಂ ವಿರೋಧಿಯಲ್ಲ. 

ನಮ್ಮಲ್ಲಿ ಒಗ್ಗಟ್ಟು ಇಲ್ಲ. ಜಾತಿ, ಮತ ತೊರೆದು ನಾವೆಲ್ಲ ಹಿಂದೂ, ಭಾರತೀಯ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಮತಕ್ಕಾಗಿ ಹೆದರಿ ರಾಜಕೀಯ ಮಾಡಬಾರದು. ಚುನಾವಣೆ ಬಂದರೆ ಮನೆಮನೆಗೆ ಹೋಗಿ ಮತ ಹಾಕಿ ಎಂದು ಕೈ, ಕಾಲು ಹಿಡಿಯುವವರ ನಡುವೆ, ಈ ಕೋಮಿನವರು ನನಗೆ ಮತ ಹಾಕಲೇ ಬೇಡಿ ಎಂದು ಹೇಳುವ ರಾಜ್ಯದ ಏಕೈಕ ರಾಜಕಾರಣಿ ಎಂದರೆ ಅದು ಬಸನಗೌಡ ಪಾಟೀಲ ಯತ್ನಾಳರು ಮಾತ್ರ. ಅಂಥವರು ರಾಜಕಾರಣಕ್ಕೆ ಬರಬೇಕಿದೆ. ನಾವು ಶಿವಾಜಿ ಮಹಾರಾಜರನ್ನು ನೋಡಿಲ್ಲ. ಆದರೆ ಆ ನಿಟ್ಟಿನಲ್ಲಿ ಕೆಲಸ ಮಾಡುವ ಯತ್ನಾಳ ಅವರು ಶಿವಾಜಿಯ ಪ್ರತಿರೂಪ ಎಂದು ಬಣ್ಣಿಸಿದರು.

ಗುರುಸಿದ್ದ ಪಟ್ಟದಾರ್ಯ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ಶಿವಾಜಿ ಮಹಾರಾಜರು ತಂದೆ-ತಾಯಿ, ಗುರುಗಳ ಮೇಲೆ ಅಪಾರವಾದ ಗೌರವ ಹೊಂದಿದ ವ್ಯಕ್ತಿ. ಹಿಂದೂ ಸಮಾಜವನ್ನು ಸಂಘಟಿಸಿ ಉಳಿಸಿದ ಮಹಾನ್‌ ಶಕ್ತಿವಂತ ಎಂದರು.

ಸೈನಿಕ ಶ್ರೀಧರ ಚಂದರಗಿ ವೇದಿಕೆ ಮೇಲಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಬಿಜೆಪಿ ಮುಖಂಡರಾದ ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಸಂಜೀವ ಕಾರಕೂನ, ವಸಂತಸಾ ದೊಂಗಡೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಶಾಂತ ಜವಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭುವನೇಶ ಪೂಜಾರ, ಶಶಿಧರ ದೇಸಾಯಿ, ಮಹೇಶ ಬಿಜಾಪೂರ, ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಸಿದ್ದು ನಾಯನೇಗಲಿ, ಶ್ರೀಶೈಲ ಕುಂಬಾರ, ಶಿವು ಬಾದೋಡಗಿ, ಪ್ರಭು ಕಳ್ಳಿಗುಡ್ಡ, ರಂಗನಾಥ ವಾಲಿಕಾರ, ಶಿವು ತುಪ್ಪದ, ಪ್ರವೀಣ ದೇವಗಿರಿಕರ, ಮಹೇಶ ಸೂಳಿಬಾವಿ ಸೇರಿದಂತೆ ಯತ್ನಾಳ ಅವರ ಅಭಿಮಾನಿಗಳು ಇದ್ದರು. ಸಭೆಯಲ್ಲಿ ಸುಮಾರು ನೂರಾರು ಮಹಿಳೆಯರು, ಯುವಕರು ಭಾಗವಹಿಸಿದ್ದರು.