ಸಾರಾಂಶ
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಂಡ ನಡೆಸಿದ ಸಭೆಯಲ್ಲಿದ್ದವರು ರೆಡಿಮೇಡ್ ಸ್ವಾಮೀಜಿಗಳು ಎಂದು ಬಿಜೆಪಿ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಸಭೆಯಲ್ಲಿ ಯಾವುದೇ ಪ್ರತಿಷ್ಠಿತ ಸ್ವಾಮೀಜಿಗಳು ಇರಲಿಲ್ಲ. ಅದೆಲ್ಲವೂ ಬಿ.ವೈ.ವಿಜಯೇಂದ್ರ ಪರವಾಗಿ ಮಾಡಿರುವುದು ಎಂಬುದು ಜಗತ್ತಿಗೆ ಗೊತ್ತಿದೆ. ಸಭೆಯಲ್ಲಿ ಕುಳಿತವರೆಲ್ಲ ದೊಡ್ಡ ಲೀಡರ್‌ಗಳಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ ಮನೆಗೆ ರಾತ್ರಿ ತೆರಳಿ ಭೇಟಿ ಮಾಡಿದ್ದಾರೆ. ಅವರ ಬೆಂಬಲ ಸಹ ಕೇಳಿದ್ದಾರೆ. ಯಾವ ಕಾರಣಕ್ಕಾಗಿ ಹೋಗಿ ಬೆಂಬಲ ಕೇಳಿದ್ದಾರೆ? ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರು ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ವೀರಶೈವ ಎಂಬ ಕಾರ್ಡ್ ಉಪಯೋಗ ಮಾಡಲಾಗುತ್ತಿದೆ. ಇದು ಸಾಧ್ಯವಿಲ್ಲ. ವೀರಶೈವರಿಗೆ ಸಿಗುವಂತಹ ಮೀಸಲಾತಿಯನ್ನು ಯಾರಾದರೂ ತಪ್ಪಿಸಿದ್ದರೆ, ಅದು ಯಡಿಯೂರಪ್ಪ ಎಂದು ಆಪಾದಿಸಿದರು.