ಬಾಕಿ ಬಾಡಿಗೆ ಕಟ್ಟದಿದ್ದರೆ ಮಳಿಗೆ ಮರು ಹರಾಜು

| Published : Mar 24 2025, 12:30 AM IST

ಸಾರಾಂಶ

ಕೆಲವರು ೧ಕ್ಕಿಂತ ಹೆಚ್ಚು ಅಂಗಡಿಗಳನ್ನು ಹರಾಜಿನಲ್ಲಿ ಕೂಗಿಕೊಂಡು ದುಬಾರಿ ಬಾಡಿಗೆಗೆ ಬೇರೆಯವರಿಗೆ ನೀಡಿ ಇಲಾಖೆಗೆ ಪಾವತಿ ಮಾಡಬೇಕಾಗಿರುವ ಕನಿಷ್ಠ ಬಾಡಿಗೆಯನ್ನು ಪಾವತಿಸದೆ ಸಬೂಬು ಹೇಳಿಕೊಳ್ಳುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಕೂಡಲೇ ಬಾಡಿಗೆ ಪಾವತಿ ಮಾಡದಿದ್ದಲ್ಲಿ ಮರು ಹರಾಜು ನಡೆಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರದ ಝಾನ್ಸಿ ರಾಣಿ ಲಕ್ಷ್ಮೀಭಾಯಿ ಕ್ರೀಡಾಂಗಣದ ಸುತ್ತಲೂ ನಿರ್ಮಾಣ ಮಾಡಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣವನ್ನು ಶೀಘ್ರವೇ ಪಾವತಿ ಮಾಡದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಅಂಗಡಿಗಳನ್ನು ಖಾಲಿ ಮಾಡಿಸಿ ಮರು ಹರಾಜು ಮಾಡುವುದಾಗಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಎಚ್ಚರಿಸಿದರು.

ಲೋಕಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ೧.೨೫ ಕೋಟಿ ರು.ಗಳ ಬಾಡಿಗೆ ಹಣವನ್ನು ಬಾಡಿಗೆದಾರರು ಬಾಕಿ ಉಳಿಸಿಕೊಂಡಿರುವುದರ ಜೊತೆಗೆ ಕಾನೂನಿಗೆ ವಿರುದ್ದವಾಗಿ ಅಂಗಡಿಗಳನ್ನು ಬೇರೆಯವರಿಗೆ ದುಬಾರಿ ಬಾಡಿಗೆಗೆ ನೀಡಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.

ಬೇರೆಯವರಿಗೆ ಮಳಿಗೆ ಬಾಡಿಗೆ

ಕೆಲವರು ೧ಕ್ಕಿಂತ ಹೆಚ್ಚು ಅಂಗಡಿಗಳನ್ನು ಹರಾಜಿನಲ್ಲಿ ಕೂಗಿಕೊಂಡು ದುಬಾರಿ ಬಾಡಿಗೆಗೆ ಬೇರೆಯವರಿಗೆ ನೀಡಿ ಇಲಾಖೆಗೆ ಪಾವತಿ ಮಾಡಬೇಕಾಗಿರುವ ಕನಿಷ್ಠ ಬಾಡಿಗೆಯನ್ನು ಪಾವತಿಸದೆ ಸಬೂಬು ಹೇಳಿಕೊಳ್ಳುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಕೂಡಲೇ ಬಾಡಿಗೆ ಪಾವತಿ ಮಾಡದಿದ್ದಲ್ಲಿ ಮರು ಹರಾಜು ನಡೆಸಬೇಕಾದಿತೆಂದು ಗುಡುಗಿದರು.

ಕ್ರೀಡಾಂಗಣ ಅಭಿವೃದ್ಧಿಗೆ ಚರ್ಚೆ

ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣಕ್ಕೆ ಯುವಜನ ಕ್ರೀಡಾ ಇಲಾಖೆಯ ಆಯುಕ್ತ ಚೇತನ್‌ರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕ್ರೀಡಾಂಗಣವನ್ನು ಯಾವ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು, ಅದಕ್ಕೆ ಯಾವ ರೀತಿಯ ತಯಾರು ಮಾಡಿರುವ ವಿಸ್ತೃತ ಯೋಜನೆಯ ಬಗ್ಗೆ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ಅಧೀಕ್ಷಕ ಅರುಣ್‌ಕುಮಾರ್, ಡಿವೈಎಸ್ಪಿ ಪಿ.ಮುರಳೀಧರ್, ನಗರ ಇನ್ಸ್‌ಪೆಕ್ಟರ್‌ ವಿಜಿಕುಮಾರ್, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್‌ ಶಿವರಾಜ್, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.