ಸಾರಾಂಶ
ಬಳ್ಳಾರಿ: ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಎರಡೂವರೆ ತಿಂಗಳು ಕಳೆದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ, 15 ದಿನದೊಳಗೆ ಆದೇಶ ಜಾರಿಗೆ ಸರ್ಕಾರ ಮುಂದಾಗದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಎಚ್.ಹನುಮಂತಪ್ಪ, ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿದರು. ಒಳ ಮೀಸಲಾತಿ ವಿಚಾರದಲ್ಲಿ ಆಯಾ ರಾಜ್ಯ ಸರ್ಕಾರಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಿವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಈವರೆಗೆ ಯಾವುದೇ ಕ್ರಮದ ಹೆಜ್ಜೆ ಇಟ್ಟಿಲ್ಲ. ದಲಿತರ ಪರವಾಗಿದ್ದೇವೆ ಎಂದು ಪದೇ ಪದೇ ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಳ ಮೀಸಲಾತಿ ವಿಚಾರದಲ್ಲಿ ಯಾಕೆ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ನೀಡುವ ಕುರಿತು ಸಿಎಂ ಎಲ್ಲೂ ತುಟಿಬಿಚ್ಚಿಲ್ಲ. ಒಳ ಮೀಸಲಾತಿ ಅನುಷ್ಠಾನಕ್ಕೆ ಸಿಎಂ ಖಂಡಿತ ಕ್ರಮ ವಹಿಸಲಿದ್ದಾರೆ ಎಂದು ಅಪಾರವಾದ ವಿಶ್ವಾಸ ಇಟ್ಟಿದ್ದೆವು. ಆದರೆ, ನಮ್ಮ ನಿರೀಕ್ಷೆ ಹಾಗೂ ವಿಶ್ವಾಸವನ್ನು ಮುಖ್ಯಮಂತ್ರಿಗಳು ಹುಸಿಗೊಳಿಸಿದ್ದಾರೆ.ನಿಜಕ್ಕೂ ಮುಖ್ಯಮಂತ್ರಿಗಳಿಗೆ ಶೋಷಿತ ಸಮುದಾಯಗಳ ಬಗ್ಗೆ ಮುತುವರ್ಜಿ ಇದ್ದರೆ ಕೂಡಲೇ ಒಳ ಮೀಸಲಾತಿ ಜಾರಿಗೆ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.
ಒಳ ಮೀಸಲಾತಿ ಅನುಷ್ಠಾನಕ್ಕೂ ಸಿಎಂ ಸಿದ್ಧರಾಮಯ್ಯ ಅವರು ಹೈಕಮಾಂಡ್ ಕಡೆ ನೋಡುತ್ತಿದ್ದಾರೆ. ನ್ಯಾಯಾಲಯವೇ ಸೂಚನೆ ನೀಡಿರುವಾಗ ಹೈಕಮಾಂಡ್ ಸೂಚನೆ ಪಡೆಯುವ ಅಗತ್ಯವೇನಿದೆ ? ಯಾವುದೇ ಸಮಿತಿಯನ್ನು ರಚಿಸುವ ಅಗತ್ಯವೇನಿದೆ ? ಈಗಾಗಲೇ ಸಿಎಂ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಭೇಟಿ ವೇಳೆ ದಲಿತಪರ ನಿಲುವು ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಸಿಎಂ ತಾವೇ ನೀಡಿದ ಭರವಸೆ ಹುಸಿಗೊಳಿಸಿದ್ದಾರೆ ಎಂದು ತಿಳಿಸಿದರು.ಸರ್ಕಾರದ ಧೋರಣೆ ಖಂಡಿಸಿ ಅಕ್ಟೋಬರ್ 16 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಒಳ ಮೀಸಲಾತಿ ಜಾರಿಗೆ ಸರ್ಕಾರಕ್ಕೆ 15 ದಿನಗಳ ಸಮಯ ನೀಡಲಾಗಿದೆ. ಅಷ್ಟರೊಳಗೆ ಕ್ರಮ ವಹಿಸದಿದ್ದರೆ ಉಪ ಚುನಾವಣೆಯಲ್ಲಿ ದಲಿತ ಸಮುದಾಯ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಜಿಲ್ಲಾ ಪ್ರಮುಖರಾದ ಎ.ಈಶ್ವರಪ್ಪ, ಸಿ.ಸೋಮಶೇಖರ್, ಎಚ್.ಹುಸೇನಪ್ಪ, ವಿಜಯಕುಮಾರ್, ರಮೇಶ್, ಅರುಣಾಚಲ, ದಾನಪ್ಪ, ಮಲ್ಲಿಕಾರ್ಜುನ, ನಾಗಭೂಷಣ, ಹೊನ್ನೂರಸ್ವಾಮಿ, ಕುರುವಳ್ಳಿ ನಾಗರಾಜ್, ಶಿವಶಂಕರ್, ಸಿದ್ದೇಶ್ವರ, ರಾಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಎಚ್.ಹನುಮಂತಪ್ಪ ಮೀಸಲಾತಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿದರು.