ಸಾರಾಂಶ
ಸಾಮಾನ್ಯಸಭೆಯ ನಿರ್ಣಯವನ್ನು ಧಿಕ್ಕರಿಸಿ ಹಾಗೂ ನಿಯಮಗಳನ್ನು ಉಲ್ಲಂಘಿಸಿ ತುರ್ತಾಗಿ ಇ-ಸ್ವತ್ತು ತಂತ್ರಾಂಶದಲ್ಲಿ ಬಡಾವಣೆಯ ಖಾತೆಗಳನ್ನು ದಾಖಲಿಸಿ ವಿತರಣೆ ಮಾಡಿದ ಪಿಡಿಓ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ ವಜ್ರ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ಅಭಿವೃದ್ಧಿಪಡಿಸಿರುವ ಬಹು ನಿವೇಶನಗಳಿಗೆ ಗ್ರಾಪಂ ಸಾಮಾನ್ಯಸಭೆಯ ನಿರ್ಣಯವನ್ನು ಧಿಕ್ಕರಿಸಿ ಇ-ಸ್ವತ್ತು ವಿತರಿಸಿರುವುದರ ಸಂಬಂಧ ಪಿಡಿಓ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಓ ಆದೇಶ ಹೊರಡಿಸಿದ್ದಾರೆ.ಪಂಚಾಯಿತಿ ಪಿಡಿಓ ಎಂ.ಕೆ.ಅನಿತಾ ರಾಜೇಶ್ವರಿ ಅಮಾನತುಗೊಂಡ ಅಧಿಕಾರಿ. ಗೋಪಾಲಪುರ ಗ್ರಾಮದ ಸರ್ವೆ ನಂ.27ರ 39 ಗುಂಟೆ ವಿಸ್ತೀರ್ಣದಲ್ಲಿ ಶ್ರೀ ವಜ್ರ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನವರು ಅಭಿವೃದ್ಧಿಪಡಿಸಿರುವ ಬಹು ನಿವೇಶನಗಳ ಬಡಾವಣೆಯಲ್ಲಿ 139 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ನಿವೇಶನಗಳಿಗೆ ಇ-ಖಾತೆ ಮಾಡುವ ಸಂಬಂಧ 24 ಅಕ್ಟೋಬರ್ 2024ರಂದು ಗ್ರಾಪಂ ಸಾಮಾನ್ಯಸಭೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ತಿಳಿಸಲಾಗಿತ್ತು.ಅಲ್ಲದೆ, ಈ ಬಡಾವಣೆಯಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸದಿರುವ ಕುರಿತಂತೆ ಕುಡಿಯುವ ನೀರು ಮತ್ತು ಸರಬರಾಜು ನೈರ್ಮಲ್ಯ ಇಲಾಖೆಯಿಂದ ಎನ್‌ಒಸಿ ಪಡೆದು ಮುಂದಿನ ಸಭೆಯಲ್ಲಿ ಮಂಡಿಸುವಂತೆ ತೀರ್ಮಾನಿಸಲಾಗಿದ್ದು, ಅಲ್ಲಿಯವರೆಗೆ ವಿಲೇ ಮಾಡದಿರುವಂತೆ ಬಹುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು.ಆದರೂ ಪಂಚಾಯಿತಿ ಸಾಮಾನ್ಯಸಭೆಯ ನಿರ್ಣಯವನ್ನು ಧಿಕ್ಕರಿಸಿ ಹಾಗೂ ನಿಯಮಗಳನ್ನು ಉಲ್ಲಂಘಿಸಿ ತುರ್ತಾಗಿ ಇ-ಸ್ವತ್ತು ತಂತ್ರಾಂಶದಲ್ಲಿ ಬಡಾವಣೆಯ ಖಾತೆಗಳನ್ನು ದಾಖಲಿಸಿ ವಿತರಣೆ ಮಾಡಿ ಪಿಡಿಓ ಎಂ.ಕೆ.ಅನಿತಾ ರಾಜೇಶ್ವರಿ ಅವರು ಕರ್ತವ್ಯಲೋಪವೆಸಗಿದ್ದರು.ಒಬ್ಬ ಸರ್ಕಾರಿ ಅಧಿಕಾರಿಯಾಗಿ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಪಂ ಆಡಳಿತ ಮಂಡಳಿಯ ಗಮನಕ್ಕೆ ತರದೆ ಕಾರ್ಯಕ್ರಮ ಅನುಷ್ಠಾನಗೊಳಿಸಿರುವುದು ನಿಯಮಬಾಹೀರವಾಗಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರಡಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಸಿಇಓ ಕೆ.ಆರ್.ನಂದಿನಿ ಆದೇಶ ಹೊರಡಿಸಿದ್ದಾರೆ.ಅಮಾನತುಗೊಂಡ ಪಿಡಿಓ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.