ಕರ್ತವ್ಯ ಲೋಪ: ಉಪತಹಸೀಲ್ದಾರ್ ಸೇರಿ ನಾಲ್ವರು ಅಮಾನತು

| Published : May 22 2025, 12:47 AM IST

ಸಾರಾಂಶ

ನಮೂನೆ 53ರಲ್ಲಿ ಸಲ್ಲಿಸಿದ್ದ ಮೂಲ ಅರ್ಜಿದಾರರ ಅರ್ಜಿಯನ್ನು ಬೇರೊಬ್ಬ ವ್ಯಕ್ತಿ ಹೆಸರಿಗೆ ಅಕ್ರಮವಾಗಿ ಬದಲಿಸಿ ಬಗರ್‌ಹುಕುಂ ಸಾಗುವಳಿ ಸಮಿತಿ ಸಭೆಯಲ್ಲಿ ಮಂಡಿಸುವ ಮೂಲಕ ಕರ್ತವ್ಯ ಲೋಪ ಎಸಗಿರುವ ಆರೋಪದಡಿಯಲ್ಲಿ ಕಂದಾಯ ಇಲಾಖೆ ನಾಲ್ವರು ಅಧಿಕಾರಿಗಳನ್ನು ಅಮಾನತ್ತುಪಡಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಮೂನೆ 53ರಲ್ಲಿ ಸಲ್ಲಿಸಿದ್ದ ಮೂಲ ಅರ್ಜಿದಾರರ ಅರ್ಜಿಯನ್ನು ಬೇರೊಬ್ಬ ವ್ಯಕ್ತಿ ಹೆಸರಿಗೆ ಅಕ್ರಮವಾಗಿ ಬದಲಿಸಿ ಬಗರ್‌ಹುಕುಂ ಸಾಗುವಳಿ ಸಮಿತಿ ಸಭೆಯಲ್ಲಿ ಮಂಡಿಸುವ ಮೂಲಕ ಕರ್ತವ್ಯ ಲೋಪ ಎಸಗಿರುವ ಆರೋಪದಡಿಯಲ್ಲಿ ಕಂದಾಯ ಇಲಾಖೆ ನಾಲ್ವರು ಅಧಿಕಾರಿಗಳನ್ನು ಅಮಾನತ್ತುಪಡಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಹೊಣಕೆರೆ ನಾಡಕಚೇರಿ ಉಪ ತಹಸೀಲ್ದಾರ್ ಸಿ.ಪ್ರಸನ್ನಕುಮಾರ್, ದೇವಲಾಪುರ ಹೋಬಳಿ ರಾಜಸ್ವ ನಿರೀಕ್ಷಕ ಸಿ.ಗಣೇಶ್, ಬಿಂಡಿಗನವಿಲೆ ಹೋಬಳಿ ರಾಜಸ್ವ ನಿರೀಕ್ಷಕ ಶಶಿಧರ್ ಮತ್ತು ತಟ್ಟಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಎಚ್.ಕರ್ಣ ಅಮಾನತ್ತುಗೊಂಡವರು.

ಏನಿದು ಪ್ರಕರಣ:

ತಾಲೂಕಿನ ದೇವರಮಲ್ಲನಾಯ್ಕನಹಳ್ಳಿ ಸ.ನಂ.61ರಲ್ಲಿ ಜಮೀನು ಸಕ್ರಮೀಕರಣಕ್ಕಾಗಿ ನಂಜೇಗೌಡ ಬಿನ್ ಸಣ್ಣಮರೀಗೌಡ ಎಂಬುವವರು ಅರ್ಜಿ ಸಂಖ್ಯೆ 1373/1998-99೯ರಲ್ಲಿ ನಮೂನೆ 53ರಲ್ಲಿ ಬಗರ್‌ಹುಕುಂ ಸಾಗುವಳಿ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಅಂದಿನಿಂದ ಹಲವು ಬಾರಿ ಸಮಿತಿಯ ಸಭೆಗಳು ನಡೆದರೂ ಕೂಡ ಸದರಿ ಅರ್ಜಿಯನ್ನು ಸಮಿತಿ ಮುಂದೆ ಮಂಡಿಸಿರಲಿಲ್ಲ.

ನಂಜೇಗೌಡರ ಅರ್ಜಿ ಬದಲಿಗೆ ತಾಲೂಕಿನ ಮೈಲಾರಪಟ್ಟಣ ಗ್ರಾಮದ ಸ.ನಂ.173ರಲ್ಲಿ 3 ಎಕರೆ ಜಮೀನು ಸಾಗುವಳಿ ಚೀಟಿಯನ್ನು ರಾಜಲಿಂಗಯ್ಯ ಬಿನ್ ಗುಂಡಯ್ಯರ ಹೆಸರಿಗೆ ಮಂಜೂರು ಮಾಡುವ ಉದ್ದೇಶದಿಂದ ಸಿದ್ಧಗೊಂಡಿದ್ದ ಕಡತವನ್ನು ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಡಿಸಲಾಗಿತ್ತು.

ತಾಲೂಕಿನ ದೊಂದೆಮಾದಹಳ್ಳಿಯ ವಕೀಲ ಹಾಗೂ ಬಗರ್‌ಹುಕುಂ ಸಾಗುವಳಿ ಸಮಿತಿ ಮಾಜಿ ಸದಸ್ಯ ನರಸಿಂಹಮೂರ್ತಿ ಎಂಬುವವರು ಕೆಲ ದಾಖಲಾತಿಗಳ ನಕಲು ಪ್ರತಿಗಳೊಂದಿಗೆ ಮಂಡ್ಯ ಜಿಲ್ಲಾಧಿಕಾರಿ ಮತ್ತು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಅಮಾನತ್ತುಪಡಿಸುವಂತೆ ಆಗ್ರಹಿಸಿದ್ದರು.

ನಂತರದಲ್ಲಿ ನಡೆದ ಕಡತಗಳ ಪರಿಶೀಲನೆ ಮತ್ತು ತನಿಖೆ ವೇಳೆ ಮೂಲ ಅರ್ಜಿದಾರ ಹಾಗೂ ಪ್ರಸ್ತುತ ಕಡತ ಸ್ವೀಕೃತವಾಗಿರುವ ವ್ಯಕ್ತಿ ಬೇರೆ ಬೇರೆ ಎಂಬುದು ನೋಂದಣಿ ವಹಿಯ ಪರಿಶೀಲನೆಯಿಂದ ಕಂಡುಬಂದಿದ್ದರೂ ಕೂಡ ಸರ್ಕಾರಿ ಜಾಗವನ್ನು ಕಾನೂನು ಮತ್ತು ನಿಯಮ ಬಾಹಿರವಾಗಿ ಅರ್ಜಿ ಸಲ್ಲಿಸದೆ ಇರುವ ಅನ್ಯ ವ್ಯಕ್ತಿಗೆ ಮಂಜೂರು ಮಾಡಿಕೊಡಲು ಯತ್ನಿಸಿರುವುದು ತಹಸೀಲ್ದಾರ್ ಅವರು ಸಲ್ಲಿಸಿದ್ದ ವರದಿ ಮತ್ತು ದಾಖಲಾತಿಯಲ್ಲಿ ದೃಢಪಟ್ಟಿತ್ತು.

ಅಂದಿನ ತಾಲೂಕು ಕಚೇರಿ ಎಲ್‌ಎನ್‌ಡಿ ಶಾಖೆ ಶಿರಸ್ತೇದಾರ್ ಆಗಿದ್ದ ಪ್ರಸ್ತುತ ಹೊಣಕೆರೆ ನಾಡಕಚೇರಿ ಉಪ ತಹಸೀಲ್ದಾರ್ ಸಿ.ಪ್ರಸನ್ನಕುಮಾರ್, ಪ್ರಥಮ ದರ್ಜೆ ಸಹಾಯಕರಾಗಿದ್ದ ಪ್ರಸ್ತುತ ಬಿಂಡಿಗನವಿಲೆ ಹೋಬಳಿ ರಾಜಸ್ವ ನಿರೀಕ್ಷಕ ಶಶಿಧರ್, ದೇವಲಾಪುರ ಹೋಬಳಿ ರಾಜಸ್ವ ನಿರೀಕ್ಷಕ ಸಿ.ಗಣೇಶ್ ಮತ್ತು ತಟ್ಟಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಎಚ್.ಕರ್ಣ ಕಡತವನ್ನು ಪರಿಶೀಲಿಸದೆ ನೇರವಾಗಿ ಬಗರ್‌ಹುಕುಂ ಸಮಿತಿ ಮುಂದೆ ಮಂಡಿಸುವ ಮೂಲಕ ಕರ್ತವ್ಯ ಲೋಪ ಎಸಗಿರುವುದಾಗಿ ತಿಳಿಸಿ ನಾಲ್ಕು ಮಂದಿ ನೌಕರರ ವಿರುದ್ಧ ಕೆಸಿಎಸ್(ಸಿಸಿಎ) ನಿಯಮಗಳು 1957ರ ನಿಯಮ 13ರ ಪ್ರಕಾರ ಜಂಟಿಯಾಗಿ ಇಲಾಖೆ ವಿಚಾರಣೆ ನಡೆಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.

ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಮತ್ತು ದೂರುದಾರರ ಮನವಿ ಮತ್ತು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಲಾಗಿ ಮೇಲ್ಕಂಡ ನೌಕರರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಮತ್ತು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಸದರಿ ನೌಕರರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿದಲ್ಲಿ ಪ್ರಕರಣದಲ್ಲಿನ ಸಾಕ್ಷಿಗಳ ಮೇಲೆ ಒತ್ತಡ ತರುವ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಉಪ ತಹಸೀಲ್ದಾರ್ ಸಿ.ಪ್ರಸನ್ನಕುಮಾರ್ ಅವರನ್ನು ಅಮಾನತ್ತುಗೊಳಿಸಿ ಪ್ರಾದೇಶಿಕ ಆಯುಕ್ತ ಡಿ.ಎಂ.ರಮೇಶ್ ಮೇ 13 ರಂದು ಆದೇಶ ಹೊರಡಿಸಿದ್ದರು.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ದೇವಲಾಪುರ ಹೋಬಳಿ ರಾಜಸ್ವ ನಿರೀಕ್ಷಕ ಸಿ.ಗಣೇಶ್, ಬಿಂಡಿಗನವಿಲೆ ಹೋಬಳಿ ರಾಜಸ್ವ ನಿರೀಕ್ಷಕ ಶಶಿಧರ್ ಮತ್ತು ತಟ್ಟಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಎಚ್.ಕರ್ಣ ಈ ಮೂವರ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಮೇ 19 ರಂದು ಆದೇಶ ಹೊರಡಿಸಿದ್ದಾರೆ.