ಕನ್ನಡಪ್ರಭ ವಾರ್ತೆ ಪಾಂಡವಪುರ
ವಿದ್ಯಾರ್ಥಿಗಳು ಶಿಕ್ಷಣದಲ್ಲಿನ ಪಾಂಡಿತ್ಯರಾದರೆ ತಮಗೆ ಆಡಳಿತಾತ್ಮಕ ಅಧಿಕಾರಿ, ಹುದ್ದೆಗಳು ಅರಸಿ ಬರುತ್ತವೆ ಎಂದು ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.ಪಟ್ಟಣದ ವಿಜಯ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಏರ್ಪಡಿಸಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಕಲಿತ ಶಿಕ್ಷಣ ಸಂಸ್ಥೆಗಳು, ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಅವರ ಬಗ್ಗೆ ಪ್ರೀತಿ ಗೌರವನ್ನು ಬೆಳೆಸಿಕೊಂಡು ವಿದ್ಯಾಭ್ಯಾಸದಲ್ಲಿ ಮುಂದುವರೆದರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪಾಂಡಿತ್ಯದೊಂದಿಗೆ ಜ್ಞಾನ ಹೆಚ್ಚಿಸಿಕೊಂಡರೆ ಆಡಳಿತಾತ್ಮಕ ಹುದ್ದೆಗಳು ತಮ್ಮನ್ನು ಹುಡುಕಿಕೊಂಡು ಬರುತ್ತವೆ. ಶಿಕ್ಷಣ, ಜ್ಞಾನವನ್ನು ಯಾರಿಂದಲು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣ ನಮ್ಮ ಶಾಶ್ವತ ಆಸ್ತಿಯಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದ ದಾಹವನ್ನು ಇಂಗಿಸಿಕೊಳ್ಳಲು ಕಾತುರರಾಗಿರಬೇಕು. ಇದರ ಜತೆಗೆ ವಿದ್ಯಾರ್ಥಿಗಳಿಗೆ ಸಂಪರ್ಕ ಸಂವಹನ ಕೌಶಲ್ಯ, ವ್ಯಕ್ತಿ ವಿಕಸನ ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.
ವಿಜಯ ಶಿಕ್ಷಣ ಸಂಸ್ಥೆಯೂ 1946ರಿಂದಲೂ ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾ ಜ್ಞಾನವನ್ನು ಉಣಬಡಿಸುತ್ತಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಾಕಷ್ಟು ಮಂದಿ ಸಮಾಜದಲ್ಲಿ ಉನ್ನತ ಹುದ್ದೆಗಳು, ಸ್ಥಾನಮಾನ ಅಲಂಕರಿಸಿ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು.
ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಸಂಸ್ಥೆ ಕೀರ್ತಿಯನ್ನು ಹೆಚ್ಚಿಸಬೇಕು. ಬಿ.ಇಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿದ ಬಳಿಕ ಸರಕಾರ ಆಡಳಿತಾತ್ಮ ಹುದ್ದೆಗಳನ್ನು ಅಲಂಕರಿಸಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಜ್ಜಾಗಬೇಕು ಎಂದರು.
ಇದೇ ವೇಳೆ ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪರನ್ನು ಸಂಸ್ಥೆ ವತಿಯಿಂದ ಅಭಿನಂಧಿಸಲಾಯಿತು. ಕಾರ್‍ಯಕ್ರಮದಲ್ಲಿ ಸಂಸ್ಥೆ ಗೌರವ ಕಾರ್ಯದರ್ಶಿ ಕೆ.ವಿ. ಬಸವರಾಜು, ನಿರ್ದೇಶಕ ಕೆ.ಸೋಮೇಗೌಡ, ಪ್ರಾಂಶುಪಾಲ ಡಾ. ಎನ್.ಕೆ. ವೆಂಕಟೇಗೌಡ, ನಿವೃತ್ತ ಉಪಪ್ರಾಂಶುಪಾಲ ಎಂ.ರಮೇಶ್, ಬಿ.ಇಡಿ ಉಪನ್ಯಾಸಕರಾದ ಕೆ.ಸೋಮಶೇಖರ್, ಆಶಾ ಎಸ್.ಆರ್, ಮಧುಸೂಧನ್ ಎಂ.ಡಿ, ಗಂಗಾಧರ್, ಲತಾ.ಕೆ.ಎಸ್, ಮಮತ, ಸುಧಾ.ಎಸ್.ಪಿ, ಪೂರ್ಣಿಮಾ.ಬಿ.ಆರ್, ವನಿತಾ ಎಚ್.ಆರ್. ಸೇರಿದಂತೆ ಹಲವರು ಇದ್ದರು.